
ಕಲಬುರಗಿ,ಆ.31: ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಜೀವನ ಚಿಂತನೆಗಳಲ್ಲಿ ಪ್ರಪಂಚ ಮತ್ತು ಪಾರಮಾರ್ಥವನ್ನು ಸಮನ್ವಯಗೊಳಿಸುವ ತತ್ವ ಅತ್ಯಂತ ಮಹತ್ವದ್ದಾಗಿದೆ ಎಂದು ಶರಣಬಸವ ವಿವಿಯ ಆಂಗ್ಲ ವಿಭಾಗದ ಪ್ರಾಧ್ಯಾಪಕ ಡಾ.ಎನ್.ಎಸ್.ಪಾಟೀಲ್ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ರವಿವಾರ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ಪ್ರಪಂಚ ಪಾರಮಾರ್ಥ ಸಿದ್ದಿ ವಿಷಯ ಕುರಿತು ಮಾತನಾಡಿ, ಪೂಜ್ಯ ಅಪ್ಪ ಅವರು ಲೌಕಿಕ ಜೀವನದಲ್ಲಿ ಕರ್ತವ್ಯನಿಷ್ಠೆಯಿಂದ ಬದುಕುತ್ತಾ, ಆಧ್ಯಾತ್ಮಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ನಿಜವಾದ ಜೀವನ ಸಿದ್ಧಿಯಾಗುತ್ತದೆ ಎಂಬ ಸಂದೇಶವನ್ನು ಅವರು ಸಾರಿದರು.
ಪ್ರಪಂಚ ಎಂದರೆ ಮನುಷ್ಯನ ದೈನಂದಿನ ಲೌಕಿಕ ಜೀವನ. ಪಾರಮಾರ್ಥ ಎಂದರೆ ಆಧ್ಯಾತ್ಮಿಕ ಉನ್ನತಿ ಮತ್ತು ಆತ್ಮಸಾಕ್ಷಾತ್ಕಾರದ ದಾರಿ. ಸತ್ಯವನ್ನು ಪಾಲಿಸುವುದು.ಪೂಜ್ಯ ಡಾ.ಅಪ್ಪ ಅವರ ಚಿಂತನೆಯ ಮುಖ್ಯ ತತ್ವವೆಂದರೆ ಪ್ರಪಂಚವನ್ನು ತ್ಯಜಿಸಿ ಪಾರಮಾರ್ಥವನ್ನು ಪಡೆಯಲು ಸಾಧ್ಯವಿಲ್ಲ, ಪ್ರಪಂಚದಲ್ಲಿಯೇ ಪಾರಮಾರ್ಥವನ್ನು ಸಾಧಿಸಬೇಕು ಎಂಬುದು. ಸಂಸಾರದಲ್ಲಿದ್ದುಕೊಂಡೇಕಾಯಕ ಮಾಡಬೇಕು, ದಾಸೋಹ ಮಾಡಬೇಕು, ಸಮಾಜದ ಸೇವೆ ಮಾಡಬೇಕು ಮತ್ತು ಆತ್ಮೋನ್ನತಿಯ ಕಡೆಗೆ ಸಾಗಬೇಕು. ಇದು ಬಸವಾದಿ ಶರಣರ ಜೀವನ ತತ್ವಗಳಿಗೂ ಹೊಂದಿಕೆಯಾಗುತ್ತದೆ.
ಪ್ರಪಂಚವಿಲ್ಲದೆ ಪಾರಮಾರ್ಥ ಅಪೂರ್ಣ .ಹಸಿದವರಿಗೆ ಅನ್ನ ನೀಡದೆ ಕೇವಲ ದೇವರ ಆರಾಧನೆ ಮಾಡುವುದಕ್ಕಿಂತ, ಹಸಿದವರ ಸೇವೆ ಮಾಡುವುದು ಶ್ರೇಷ್ಠವಾದ ಪಾರಮಾರ್ಥ. ಸಮಾಜದ ಸಮಸ್ಯೆಗಳನ್ನು ಕಡೆಗಣಿಸಿ ಕೇವಲ ವೈಯಕ್ತಿಕ ಮೋಕ್ಷದ ಬಗ್ಗೆ ಯೋಚಿಸುವುದು ಸಂಪೂರ್ಣ ಜೀವನವಲ್ಲ.ಆದ್ದರಿಂದ ಪೂಜ್ಯ ಅಪ್ಪನವರ ದೃಷ್ಟಿಯಲ್ಲಿಮಾನವ ಸೇವೆಯೇ ಶಿವ ಸೇವೆ, ಕಾಯಕವೇ ಪೂಜೆ ಮತ್ತು ದಾಸೋಹವೇ ನಿಜವಾದ ಧರ್ಮ.
ಪೂಜ್ಯ ಡಾ.ಅಪ್ಪ ಅವರು ಶಿಕ್ಷಣಕ್ಕೆ ವಿಶೇಷ ಮಹತ್ವ ನೀಡಿದ್ದವರು. ದಾಸೋಹದ ಮನೋಭಾವವೇ ಪ್ರಪಂಚ ಮತ್ತು ಪಾರಮಾರ್ಥದ ನಡುವಿನ ಸೇತುವೆಯಾಗಿದೆ.
ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಚಿಂತನೆಯ ಪ್ರಕಾರ ಸಮಾಜದಿಂದ ದೂರವಿದ್ದು ಆಧ್ಯಾತ್ಮಿಕತೆಯನ್ನು ಸಾಧಿಸುವುದಕ್ಕಿಂತ, ಸಮಾಜದ ಮಧ್ಯದಲ್ಲಿದ್ದು ಜನರ ಕಷ್ಟಗಳಿಗೆ ಸ್ಪಂದಿಸುವುದು.
ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಪೆÇ್ರೀತ್ಸಾಹ ನೀಡಿದರು.ಬಡ ಮತ್ತು ಹಿಂದುಳಿದ ವರ್ಗಗಳ ಶಿಕ್ಷಣಕ್ಕೆ ಮಹತ್ವ ನೀಡಿದರು. ಸಮಾಜಮುಖಿ ಸೇವೆಗೆ ಆದ್ಯತೆ ಕೊಟ್ಟರು. ಮಾನವೀಯತೆ ಮತ್ತು ಸಮಾನತೆಯನ್ನು ಪ್ರತಿಪಾದಿಸಿದರು. ಇವುಗಳೆಲ್ಲವೂ ಅವರ ಪ್ರಪಂಚ ಪಾರಮಾರ್ಥ ಸಿದ್ಧಿಯ ಪ್ರಾಯೋಗಿಕ ರೂಪಗಳಾಗಿವೆ. ಒಟ್ಟಾರೆಯಾಗಿ, ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಪ್ರಪಂಚ ಪಾರಮಾರ್ಥ ಸಿದ್ಧಿ ದಾಸೋಹವು ಜೀವನದ ಸಮಗ್ರ ತತ್ವವಾಗಿದೆ. ಪ್ರಪಂಚ ಮತ್ತು ಪಾರಮಾರ್ಥಗಳು ಪರಸ್ಪರ ವಿರೋಧಿಗಳಲ್ಲ, ಅವು ಪರಸ್ಪರ ಪೂರಕವಾಗಿವೆ ಎಂಬ ಮಹತ್ವದ ಸಂದೇಶವನ್ನು ಈ ಚಿಂತನೆ ನೀಡುತ್ತದೆ ಎಂದು ಹೇಳಿದರು.































