ಕೋಲಾರ,ಆ,೨೬- ರಾಜ್ಯ ಸರ್ಕಾರದ ಆದೇಶದಂತೆ ಗ್ರಾಮೀಣ ಪ್ರದೇಶಗಳ ಪ್ರತಿ ಗ್ರಾಮ ಪಂಚಾಯಿತಿ ಹಾಗೂ ನಗರ ಪ್ರದೇಶಗಳ ಪ್ರತಿ ವಾರ್ಡ್‌ನಲ್ಲಿ ಭಾರತ್ ಜೋಡೋ ಯುವಕರ ಸಂಘಗಳನ್ನು ರಚಿಸಲು ಯುವಕಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಗ್ರಾಮಾಂತರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ೧೬ರಿಂದ ೩೫ ವರ್ಷದೊಳಗಿನ ಯುವಕ-ಯುವತಿಯರು ಸರ್ಕಾರದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ಇನ್ನೂ ಎರಡು ದಿನ ಮಾತ್ರ ಕಾಲಾವಕಾಶ ಇರುವುದರಿಂದ ಅರ್ಹರು ಕೂಡಲೇ ಅರ್ಜಿ ಸಲ್ಲಿಸಬೇಕು ಎಂದರು.
ಪ್ರತಿ ಸಂಘದಲ್ಲಿ ಸುಮಾರು ೧೦೦ ಸದಸ್ಯರನ್ನು ಒಳಗೊಂಡು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಗ್ರಾಮ ಪಂಚಾಯಿತಿ ಹಾಗೂ ನಗರಸಭೆ ವಾರ್ಡ್ ಮಟ್ಟದಲ್ಲಿ ಸಂಘಗಳನ್ನು ರಚಿಸಲಾಗುವುದು. ಸಂಘಗಳ ಮೂಲಕ ಕ್ರಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಯುವಜನರ ಸಬಲೀಕರಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸರ್ಕಾರದಿಂದ ಪ್ರತಿ ಸಂಘಕ್ಕೆ ರೂ ೧೦ ಲಕ್ಷ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಯುವತಿಯರಿಗೂ ಯೋಜನೆಯಲ್ಲಿ ಅವಕಾಶವಿದ್ದು, ಆಧಾರ್ ಕಾರ್ಡ್, ವಯಸ್ಸಿನ ಪುರಾವೆ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗ ವೈಯಕ್ತಿಕವಾಗಿ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಪೂರ್ಣಗೊಂಡ ಬಳಿಕ ಜಿಲ್ಲಾಧಿಕಾರಿಗಳ ಹಂತದಲ್ಲಿ ಸಂಘಗಳ ರಚನೆ ನಡೆಯಲಿದೆ ಎಂದು ಹೇಳಿದರು.
ಯುವಜನರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಗ್ರಾಮ ಹಾಗೂ ವಾರ್ಡ್‌ಗಳಲ್ಲಿ ಸಂಘಗಳನ್ನು ರಚಿಸಿ, ಕ್ರಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್‌ಗೊಳ್ಳಬೇಕು ಎಂದು ಮೈಲಾಂಡಹಳ್ಳಿ ಮುರಳಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಯಲವಾರ ರಾಜಕುಮಾರ್, ಕೋಟೆ ಶ್ರೀನಿವಾಸ್, ಜಗದೀಶ್, ಮದನಹಳ್ಳಿ ಮಹೇಶ್, ಶೋಯೆಬ್ ಇದ್ದರು.
























