Home ಜಿಲ್ಲೆ ದಾವಣಗೆರೆ ದಾವಣಗೆರೆ ಬಂದ್ ವಿಫಲ; ನೀರಿಗಾಗಿ ರೈತರ ಪ್ರತಿಭಟನೆ, ಹಲವರ ಬಂಧನ

ದಾವಣಗೆರೆ ಬಂದ್ ವಿಫಲ; ನೀರಿಗಾಗಿ ರೈತರ ಪ್ರತಿಭಟನೆ, ಹಲವರ ಬಂಧನ

ದಾವಣಗೆರೆ, ಆ. ೨೪- ಭದ್ರಾ ಜಲಾಶಯದಿಂದ ಮಳೆಗಾಲದ ಬೆಳೆಗೆ ನೀರು ಹರಿಸುವಂತೆ ಆಗ್ರಹಿಸಿ ವಿವಿಧ ರೈತ ಸಂಘಟನೆಗಳು ಕ ಕರೆ ನೀಡಿದ್ದ ದಾವಣಗೆರೆ ಬಂದ್ ಸಂಪೂರ್ಣ ವಿಫಲವಾಗಿದೆ.
ಇಂದು ಮುಂಜಾನೆಯಿಂದಲೇ ನಗರದ ಪ್ರಮುಖ ವೃತ್ತಗಳಲ್ಲಿ ಜಮಾಯಿಸಿದ ರೈತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ತೀವ್ರಗೊಳ್ಳುವ ಸೂಚನೆ ಹಿನ್ನೆಲೆಯಲ್ಲಿ ಹಾಗೂ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹಲವು ರೈತ ನಾಯಕರನ್ನು ಮತ್ತು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.


ರೈತ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದರೂ ಸಹ ಸಾರ್ವಜನಿಕರಿಂದ ಹಾಗೂ ವರ್ತಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದಲ್ಲಿ ಅಂಗಡಿ-ಮುಂಗ್ಗಟ್ಟುಗಳು, ಸಾರಿಗೆ ವ್ಯವಸ್ಥೆ ಹಾಗೂ ದೈನಂದಿನ ಚಟುವಟಿಕೆಗಳು ಯಥಾರೀತಿ ಸಾಗಿದ್ದರಿಂದ ಬಂದ್ ಸಂಪೂರ್ಣವಾಗಿ ವಿಫಲಗೊಂಡಿತು.


ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದ್ದರೂ (ಸುಮಾರು ೧೭೦ ಅಡಿಗೂ ಹೆಚ್ಚು) ಸರ್ಕಾರ ಹಾಗೂ ಜಿಲ್ಲೆಯ ಮಂತ್ರಿಗಳು ಮಳೆಗಾಲದ ಬೆಳೆಗೆ ನೀರು ಬಿಡಲು ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ರೈತ ನಾಯಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ಮಳೆಗಾಲಕ್ಕೆ ನೀರು ಬಿಡದೆ ಬೇಸಿಗೆಗೆ ನೀರನ್ನು ಕಾಯ್ದಿರಿಸುವ ನೆಪದಲ್ಲಿ ಸರ್ಕಾರ ರೈತರ ಮಧ್ಯೆ ಗೊಂದಲ ಸೃಷ್ಟಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪೊಲೀಸರ ಸಮಯೋಚಿತ ಮುಂಜಾಗ್ರತಾ ಕ್ರಮಗಳಿಂದಾಗಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಪರಿಸ್ಥಿತಿ ಹತೋಟಿಯಲ್ಲಿದೆ.