
ಮಂಗಳೂರು- ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳಿಸುವ ಮೂಲಕ ಇಸ್ರೋ ಹಾಗೂ ಭಾರತೀಯ ವಿಜ್ಞಾನಿಗಳು ಸಾಧಿಸಿದ ಐತಿಹಾಸಿಕ ಯಶಸ್ಸು ಮತ್ತು ಅದರ ಸ್ಮರಣೆಯನ್ನು ಜನಮಾನಸದಲ್ಲಿ ಶಾಶ್ವತವಾಗಿಸುವ ಉದ್ದೇಶದಿಂದ ದೇಶಾದ್ಯಂತ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಮಂಗಳೂರು ಪ್ರೆಸ್ ಕ್ಲಬ್ನ ಅಧ್ಯಕ್ಷ ಪಿ.ಬಿ. ಹರೀಶ್ ರೈ ಹೇಳಿದರು.
ಅವರು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ? ೨೦೨೬ರ ಪ್ರಯುಕ್ತ ನಡೆದ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚಂದ್ರ ಮಾನವನಿಗೆ ಸದಾ ಕುತೂಹಲದ ವಿಷಯವಾಗಿದೆ. ಬಾಲ್ಯದಿಂದಲೇ ಚಂದ್ರನ ಕುರಿತ ಪ್ರೀತಿ, ಕಲ್ಪನೆ ಹಾಗೂ ಕುತೂಹಲವನ್ನು ಮೂಡಿಸುವ ಅನೇಕ ಕಥೆಗಳು, ಕವನಗಳು ಮತ್ತು ಘಟನೆಗಳನ್ನು ನಾವು ಕೇಳುತ್ತಾ, ಓದುತ್ತಾ ಬೆಳೆದಿದ್ದೇವೆ. ಮುಂದೆ ಶಿಕ್ಷಣದ ಮೂಲಕ ಬಾಹ್ಯಾಕಾಶ ವಿಜ್ಞಾನ ಮತ್ತು ಅದರ ವೈಜ್ಞಾನಿಕ ಮಹತ್ವವನ್ನು ಅರಿತುಕೊಂಡಿದ್ದೇವೆ. ಜನಮಾನಸದ ವಿವಿಧ ಹಬ್ಬಗಳು ಮತ್ತು ಆಚರಣೆಗಳೊಂದಿಗೂ ಚಂದ್ರನಿಗೆ ನಿಕಟವಾದ ಸಂಬಂಧವಿದೆ. ಅನೇಕ ಹಬ್ಬಗಳು ಹುಣ್ಣಿಮೆ ಮತ್ತು ಅಮಾವಾಸ್ಯೆಯ ಚಂದ್ರನ ಚಲನೆಯನ್ನು ಆಧರಿಸಿಕೊಂಡಿರುವುದನ್ನು ನಾವು ಕಾಣಬಹುದು ಎಂದರು.
ಕೇಂದ್ರದ ನಿರ್ದೇಶಕ ಡಾ. ಅಶೋಕ್ ಕೆ.ಆರ್. ಮಾತನಾಡಿ, ವಿದ್ಯಾರ್ಥಿಗಳು ಪ್ರತಿಯೊಂದು ವಿಷಯವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಗಮನಿಸಿ, ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವೈಜ್ಞಾನಿಕವಾಗಿ ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳುವುದರ ಜೊತೆಗೆ, ಲಭ್ಯವಾಗುವ ಪ್ರತಿಯೊಂದು ಅವಕಾಶವನ್ನೂ ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ ಎನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಆವಿ??ಕರಗಳು ಮತ್ತು ಸಂಶೋಧನೆಗಳ ಮೂಲಕ ವಿಜ್ಞಾನಿಗಳು ನೀಡುತ್ತಿರುವ ಕೊಡುಗೆ ಅಪಾರ. ಆವಿ??ಕರ, ಸಹಯೋಗ ಮತ್ತು ನಾಯಕತ್ವ ಎಂಬ ಕಾರ್ಯತಂತ್ರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ದೇಶದ ಅಭಿವೃದ್ಧಿಗೆ ಪೂರಕವಾದ ಸಂಶೋಧನೆ ಮತ್ತು ನವೀನ ಪ್ರಯತ್ನಗಳಲ್ಲಿ ಯುವಜನತೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಭಾರತ ನಿರಂತರವಾಗಿ ಮುನ್ನಡೆಯುತ್ತಿದ್ದು, ‘ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ’ ಎಂಬ ಘೋಷಣೆಯೊಂದಿಗೆ ಇಂದು ‘ಜೈ ಅನುಸಂಧಾನ’ದ ಮೂಲಕ ಸಂಶೋಧನೆ, ನಾವೀನ್ಯತೆ ಹಾಗೂ ವೈಜ್ಞಾನಿಕ ಚಿಂತನೆಗೆ ಹೆಚ್ಚಿನ ಪ್ರೇರಣೆ, ಶಕ್ತಿ ಮತ್ತು ಸ್ಫೂರ್ತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ನಂತರದ ಅಧಿವೇಶನದಲ್ಲಿ ಸಂಪನ್ಮೂಲ ವ್ಯಕ್ತಿ ಮಂಗಳೂರು ಅಮೇಚರ್ ರೇಡಿಯೋ ಕ್ಲಬ್ನ ರೋಹಿತ್ ಎಸ್ ರಾವ್ ಅವರು ಊಂಒ ರೇಡಿಯೋ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಮಧ್ಯಾಹ್ನ ನಂತರದ ಅವಧಿಯಲ್ಲಿ ಫ್ಲಾಸ್ ಶೋ ಟೆಕ್ನಾಲಜೀಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಹಾಸ್ ಅಮೀನ್ ಆಸ್ಟ್ರೋಫೊಟೋಗ್ರಾಫಿ ಬಗ್ಗೆ ಮಾಹಿತಿ ಸಂವಾದ ಕಾರ್ಯಕ್ರಮದ ಜತೆಗೆ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು.
ಕೇಂದ್ರದ ಕ್ಯುರೇಟರ್ ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿದರು. ಶೈಕ್ಷಣಿಕ ಸಹಾಯಕಿ ಚಂಚಲಾಕ್ಷಿ ಸ್ವಾಗತಿಸಿ, ವೈಜ್ಞಾನಿಕ ಅಧಿಕಾರಿ ವಿಘ್ನೇಶ್ ಭಟ್ ವಂದಿಸಿದರು. ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಸುಮಾರು ೧೫೦ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.


































