
ಕಲಬುರಗಿ,ಆ.26-ಇಲ್ಲಿನ ಮಹಾನಗರ ಪಾಲಿಕೆಯ ನಿವೃತ್ತ ನೌಕರರಿಗೆ ಪಿಂಚಣಿ ಸೌಲಭ್ಯದ ಉಪಧನ ಮಂಜೂರು ಮಾಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘದ ನೇತೃತ್ವದಲ್ಲಿ ಆ.24 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ವೀರಭದ್ರ ಸಿಂಪಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಹತ್ತು ವರ್ಷ ದಿನಗೂಲಿ ಸೇವೆ ಸಲ್ಲಿಸಿ ಸಕ್ರಮಗೊಂಡ ನಿವೃತ್ತ ನೌಕರರಿಗೆ ದಿನಗೂಲಿ ಸೇವಾ ಅವಧಿಯ ಹತ್ತು ವರ್ಷಗಳ ಉಪಧನ ಪಾವತಿಸಲು 2 ವರ್ಷಗಳಿಂದ ವಿಳಂಬ ಮಾಡಲಾಗುತ್ತಿದೆ. ಸಕ್ರಮ ಪ್ರಾಧಿಕಾರ ಮತ್ತು ಕಾರ್ಮಿಕ ಇಲಾಖೆಯ ನ್ಯಾಯಾಲಯ ಉಪಧನ ಪಾವತಿಸಲು ತೀರ್ಪು ನೀಡಿದ್ದರೂ ಮಹಾನಗರ ಪಾಲಿಕೆ ಮತ್ತು ಪೌರಾಡಳಿತ ನಿರ್ದೇಶನಾಲಯಗಳು ಉಪಧನ ಪಾವತಿಸಲು ವಿಳಂಬ ಮಾಡುತ್ತಿವೆ ಎಂದು ದೂರಿದರು.
ಸವೋಚ್ಛ ನ್ಯಾಯಾಲಯದ ತೀರ್ಪು ಹಾಗೂ ಸರಕಾರದ ಆದೇಶಗಳನ್ನು ಪರಿಶೀಲಿಸದೆ ಹಾರಿಕೆ ಉತ್ತರ ನೀಡಿ ಕಾಲ ಹರಣ ಮಾಡಲಾಗುತ್ತಿದೆ. ಅರ್ಹತಾದಾಯಕ ಸೇವಾ ಮಂಜೂರಾತಿಯಲ್ಲೂ ಹೀಗೆ ವಿಳಂಬಗೊಳಿಸಿ 7-8 ವರ್ಷಗಳ ಕಾಲ ಕಾಲಹರಣ ಮಾಡಲಾಗಿದೆ. ಈ ವಿಳಂಬ ನೀತಿಯನ್ನು ಖಂಡಿಸಿ ಕಳೆದ ತಿಂಗಳು 13 ರಂದು ಮಹಾನಗರ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿ ಉಪಧನ ಮಂಜೂರು ಮಾಡಲು ಮನವಿ ಮಾಡಲಾಗಿದೆ. ಆದರೆ ಇದುವರೆಗೆ ಕ್ರಮ ಕೈಗೊಂಡಿಲ್ಲ. ಆ.17ರ ಒಳಗಾಗಿ ಮಹಾನಗರ ಪಾಲಿಕೆಯ ನಿವೃತ್ತ ನೌಕರರಿಗೆ ಪಿಂಚಣಿ ಸೌಲಭ್ಯದ ಉಪಧನ ಮಂಜೂರು ಮಾಡದಿದ್ದಲ್ಲಿ ಆ.24 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಿವಾಜಿ ಜಮಾದಾರ, ಶಿವಾನಂದ ಯಳವಂತಗಿ, ಶ್ರೀಕಾಂತ ಶೆಟ್ಟಿ, ಡಿ.ಸುಭಾಷ, ರಿಯಾಜ್ ಅಹ್ಮದ್, ಕಲ್ಯಾಣಪ್ಪ ಬಿರಾದಾರ, ಹಮೀದ್ ಅನ್ಸಾರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿರಿದ್ದರು.































