Home ಮುಖಪುಟ ಸುದ್ದಿ ಖಾಸಗಿ ಬಸ್ ಪಲ್ಟಿ ಮೂವರ ಸಾವು:೨೦ಮಂದಿಗೆ ಗಾಯ

ಖಾಸಗಿ ಬಸ್ ಪಲ್ಟಿ ಮೂವರ ಸಾವು:೨೦ಮಂದಿಗೆ ಗಾಯ

ಚಿತ್ರದುರ್ಗ,ಆ.೨೧-ಬೆಂಗಳೂರಿಂದ ಗೋವಾಕ್ಕೆ ವೇಗವಾಗಿ ಹೋಗುತ್ತಿದ್ದ ಖಾಸಗಿ ಟೂರಿಸ್ಟ್ ಬಸ್ ಹಿರಿಯೂರು ತಾಲೂಕಿನ ಐಮಂಗಲ ಬಳಿ ಪಲ್ಟಿಯಾಗಿ ಮೂವರು ಸಾವನ್ನಪ್ಪಿ ೨೦ ಮಂದಿ ಗಾಯಗೊಂಡಿದ್ದಾರೆ.


ಬಸ್ ಚಾಲಕ ಗುರುಪ್ರಸಾದ್ ಹಾಗೂ ಕ್ಲೀನರ್ ಶಂಕರ್ ಮೃತಪಟ್ಟವರು.ಅಪಘಾತದಲ್ಲಿ ಗಾಯಗೊಂಡಿರುವ ಓರ್ವನ ಪ್ರಯಾಣಿಕನ ಸ್ಥಿತಿ ಗಂಭೀರವಾಗಿದೆ.
ಐಮಂಗಲ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯ ಎಡ ಭಾಗದ ಟ್ರೆಂಚ್‌ಗೆ ಬಸ್ ಬಿದ್ದಿದ್ದು, ಬಸ್‌ನ ಮುಂಭಾಗ ಜಖಂ ಆಗಿದೆ. ಈ ಅಪಘಾತದಲ್ಲಿ ೨೦ ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.


ಐಲ್ಯಾಂಡ್ ಬಸ್ ಬೆಂಗಳೂರಿನಿಂದ ಗೋವಾಕ್ಕೆ ತೆರಳುತಿತ್ತು. ಬಸ್‌ನಲ್ಲಿ ೫೩ ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.


ಬಸ್‌ನಲ್ಲಿದ್ದ ಪ್ರಯಾಣಿಕರೆಲ್ಲರೂ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅರಿಕೆರೆ ಬಳಿಕ ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಾಗಿದ್ದಾರೆ.


ಕೇರಳ ಮೂಲದ ವಿದ್ಯಾರ್ಥಿನಿಯರು ಗೋವಾ ಪ್ರವಾಸಕ್ಕೆ ತೆರಳಿ, ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ನಿದ್ದೆ ಮಂಪರಿನಲ್ಲಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿರಬಹುದು ಎಂದು ಶಂಕಿಸಲಾಗಿದೆ.


ಸ್ಥಳಕ್ಕೆ ಐಮಂಗಲ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಸ್‌ನ್ನು ಮೇಲೆತ್ತಿದ್ದಾರೆ.