
ನವದೆಹಲಿ,ಆ.20- ಭಾರತೀಯ ಹವಾಮಾನ ಇಲಾಖೆ ದೇಶದ ವಿವಿಧ ಭಾಗಗಳಲ್ಲಿ ಮುಂಗಾರು ಮಾರುತಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮಹತ್ವದ ಹವಾಮಾನ ಮುನ್ನೆಚ್ಚರಿಕೆಯನ್ನು ಬಿಡುಗಡೆ ಮಾಡಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ಸಕ್ರಿಯ ವಾತಾವರಣದ ಪ್ರಭಾವದಿಂದಾಗಿ ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ದೇಶದ ಒಟ್ಟು 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಪ್ರದೇಶದ ಲಖನೌ, ಕಾನ್ಪುರ, ವಾರಾಣಸಿ, ಆಗ್ರಾ ಹಾಗೂ ಮೀರತ್ ಸೇರಿದಂತೆ ಪೂರ್ವ ಮತ್ತು ಪಶ್ಚಿಮ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಿಂಚನದೊಂದಿಗೆ ಭಾರಿ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಅವಧಿಯಲ್ಲಿ ಗಂಟೆಗೆ 50 ರಿಂದ 70 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದ್ದು, ಸಾರ್ವಜನಿಕರು ಜಾಗರೂಕರಾಗಿರಲು ಸೂಚಿಸಲಾಗಿದೆ. ಅದೇ ರೀತಿ ಬಿಹಾರದ ಪಾಟ್ನಾ, ಗಯಾ, ಭಾಗಲ್ಪುರ್ ಮತ್ತು ಪೂರ್ಣಿಯಾ ಮುಂತಾದ ಭಾಗಗಳಲ್ಲಿಯೂ ಸತತ ಮಳೆಯಾಗುವ ನಿರೀಕ್ಷೆಯಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಭೀತಿ ಎದುರಾಗಿದೆ.
ಈ ಎರಡು ಪ್ರಮುಖ ರಾಜ್ಯಗಳ ಜೊತೆಗೆ ಉತ್ತರಾಖಂಡ, ಹಿಮಾಚಲ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಮಧ್ಯಪ್ರದೇಶ, ಛತ್ತೀಸ್ಗಢ, ಹರಿಯಾಣ, ಪಂಜಾಬ್, ಮಹಾರಾಷ್ಟ್ರ, ಗುಜರಾತ್, ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳಲ್ಲಿಯೂ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಹವಾಮಾನ ಇಲಾಖೆಯು ಹಳದಿ ಮತ್ತು ಕಿತ್ತಳೆ ಎಚ್ಚರಿಕೆಯನ್ನು ಘೋಷಿಸಿದೆ. ವಿಶೇಷವಾಗಿ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಂತಹ ಪರ್ವತ ಪ್ರದೇಶಗಳಲ್ಲಿ ಮಳೆಯಿಂದಾಗಿ ಭೂಕುಸಿತದ ಅಪಾಯ ಹೆಚ್ಚಿರುವುದರಿಂದ ಪ್ರಯಾಣಿಕರು ಮತ್ತು ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಎನ್ಸಿಆರ್ ಪ್ರದೇಶಗಳಾದ ನೋಯ್ಡಾ, ಗುರುಗ್ರಾಮ, ಘಾಜಿಯಾಬಾದ್ ಹಾಗೂ ಫರೀದಾಬಾದ್ಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಾಧಾರಣದಿಂದ ಹಗುರ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಪ್ರಭಾವದಿಂದ ತಾಪಮಾನದಲ್ಲಿ ಕೊಂಚ ಇಳಿಕೆಯಾಗಿ ವಾತಾವರಣ ತಂಪಾಗಲಿದೆಯಾದರೂ, ಗಾಳಿಯಲ್ಲಿನ ತೇವಾಂಶದ ಪ್ರಮಾಣ ಹೆಚ್ಚಿರುವುದರಿಂದ ಧಗೆಯ ಅನುಭವ ಮುಂದುವರಿಯಲಿದೆ. ಸಾರ್ವಜನಿಕರು ಸಿಡಿಲು ಮತ್ತು ಬಿರುಗಾಳಿಯ ಸಮಯದಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಹಾಗೂ ರೈತರು ತಮ್ಮ ಬೆಳೆಗಳ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.































