
ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.17: 126ನೇ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ, ಎಲ್ಎಲ್ಸಿ ಕೆಳಮಟ್ಟದ ಕಾಲುವೆಗೆ ಕರ್ನಾಟಕದ ಪಾಲಿನಿಂದ ನೀಡಲಾಗುತ್ತಿದ್ದ 650 ಕ್ಯೂಸೆಕ್ಸ್ ನೀರು ಬಳ್ಳಾರಿ ಜಿಲ್ಲೆಯ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗಾಗಿ ಸಾಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ಯೋಜನೆ, ಸಾಂಖ್ಯಿಕ ಇಲಾಖೆ ಸಚಿವ ಬಿ. ನಾಗೇಂದ್ರ ಅವರು ಇಂದು ಟಿ.ಬಿ. ಡ್ಯಾಂನ ಹಿರಿಯ ಅಧಿಕಾರಿಗಳು ಮತ್ತು ರೈತ ಸಂಘಟನೆಯ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು.
ಟಿ.ಬಿ. ಡ್ಯಾಂ ನೀರಿನ ಹಂಚಿಕೆ ವಿಚಾರದಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ನಡುವಿನ ಒಪ್ಪಂದದಂತೆ, 1973ರಿಂದ 2025ರವರೆಗೆ ಎಲ್ಎಲ್ಸಿ ಕೆಳಮಟ್ಟದ ಕಾಲುವೆಗೆ ಎರಡೂ ರಾಜ್ಯಗಳ ಪಾಲಿನ ನೀರನ್ನು ಒಟ್ಟಿಗೆ ಹರಿಸುವ ಪದ್ಧತಿ ಜಾರಿಯಲ್ಲಿತ್ತು.
ಆದರೆ, ಇದೀಗ ಆಂಧ್ರಪ್ರದೇಶ ಏಕಾಏಕಿ ತನ್ನ ಪಾಲಿನ ನೀರನ್ನು ಸ್ವೀಕರಿಸದಿರುವ ಹಿನ್ನೆಲೆಯಲ್ಲಿ, ಸಚಿವ ಬಿ. ನಾಗೇಂದ್ರ ಅವರು ಆಂಧ್ರಪ್ರದೇಶದ ನೀರಾವರಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ತಮ್ಮ ಪಾಲಿನ ನೀರನ್ನು ಬಿಟ್ಟುಕೊಡಬೇಕು; ಇಲ್ಲವಾದಲ್ಲಿ ಎರಡೂ ರಾಜ್ಯಗಳ ರೈತರಿಗೆ ಹಾಗೂ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗು ತ್ತದೆ ಎಂದು ಮನವರಿಕೆ ಮಾಡಿಕೊಟ್ಟರು.
ಇದೇ ವೇಳೆ, ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರೊಂದಿಗೂ ಸಚಿವ ಬಿ. ನಾಗೇಂದ್ರ ದೂರವಾಣಿ ಮೂಲಕ ಚರ್ಚಿಸಿದರು.
ಈ ವೇಳೆ, ‘ರಾಜ್ಯದ ರೈತಾಪಿ ವರ್ಗದ ಹಿತಕಾಪಾಡುವುದು ನಮ್ಮ ಮೊದಲ ಆದ್ಯತೆ. ನಾಡಿನ ಜಲಮೂಲಗಳ ರಕ್ಷಣೆಗೆ ನಮ್ಮ ಸರ್ಕಾರ ಹಾಗೂ ಸಚಿವರು ಹಗಲಿರುಳು ಶ್ರಮಿಸಲಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಗಳು ಭರವಸೆ ನೀಡಿದರು.






























