Home ಜಿಲ್ಲೆ ಬಣಜಿಗ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಸಚಿವರಿಗೆ ಮನವಿ

ಬಣಜಿಗ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಸಚಿವರಿಗೆ ಮನವಿ

ವಿಜಯಪುರ, ಆ. 17: ಬಣಜಿಗ ಸಮಾಜಕ್ಕೆ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಪ್ರವರ್ಗ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಬಬಲೇಶ್ವರ ತಾಲೂಕು ಘಟಕದ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರವಿವಾರ ಬಬಲೇಶ್ವರ ಮತಕ್ಷೇತ್ರದ ಶಾಸಕರು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅವರನ್ನು ಗೃಹ ಕಚೇರಿಯಲ್ಲಿ ಭೇಟಿ ಮಾಡಿದ ಸಮಾಜದ ಮುಖಂಡರು, ಸಚಿವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಬಣಜಿಗ ಸಮಾಜದ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರವರ್ಗ 2ಎ ಮೀಸಲಾತಿ ನೀಡುವಂತೆ ಸರ್ಕಾರದ ಗಮನ ಸೆಳೆಯಲಾಯಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮುತ್ತು ಕಿಣಗಿ (ಬಸವನಬಾಗೇವಾಡಿ), ತಾಲೂಕಾಧ್ಯಕ್ಷ ಅಶೋಕ ತಿಮಶೆಟ್ಟಿ, ಉಮೇಶ ಮಲ್ಲನವರ, ಚಂದ್ರಕಾಂತ ಅಡ್ಡಿ, ಪ್ರಕಾಶ ಕೋರಿ, ಸಂಗಮೇಶ ಮುಳುವಾಡ, ಚಂದ್ರಕಾಂತ ವಾಲಿ, ಮಲ್ಲಿಕಾರ್ಜುನ ಅಂಗಡಿ, ಸತೀಶ ಪಡಸಲಗಿ, ವೀರಭದ್ರ ಜರಲಿ, ಲಚ್ಚಪ್ಪ ಕೊಡಬಾಗಿ ಸೇರಿದಂತೆ ಸಮಾಜದ ಹಿರಿಯರು ಹಾಗೂ ಬಬಲೇಶ್ವರ ತಾಲೂಕಿನ ವಿವಿಧ ಗ್ರಾಮಗಳ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.