Home ಜಿಲ್ಲೆ ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿ: ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ಆಗ್ರಹ

ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿ: ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ಆಗ್ರಹ

ವಿಜಯಪುರ, ಆ. 17: ವಿಜಯಪುರ ಜಿಲ್ಲೆಯನ್ನು ಸಂವಿಧಾನದ 371(ಜೆ) ವಿಶೇಷ ಮೀಸಲಾತಿ ವ್ಯಾಪ್ತಿಗೆ ಸೇರ್ಪಡೆಗೊಳಿಸುವಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕು ಎಂದು ಆಗ್ರಹಿಸಿ ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದರು.
ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅವರ ಸಮ್ಮುಖದಲ್ಲಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸಚಿವರು ಹಾಗೂ ಶಾಸಕರು ಹೋರಾಟ ಸಮಿತಿಯ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ, ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಹೋರಾಟ ಸಮಿತಿ ಮುಖಂಡರು ಮಾತನಾಡಿ, 1948ರ ಸೆಪ್ಟೆಂಬರ್ 17ರಂದು ಹೈದರಾಬಾದ್ ಸಂಸ್ಥಾನ ಭಾರತ ಒಕ್ಕೂಟಕ್ಕೆ ವಿಲೀನಗೊಳ್ಳುವವರೆಗೆ ವಿಜಯಪುರ ಜಿಲ್ಲೆ ನಿಜಾಮರ ಆಡಳಿತದ ಭಾಗವಾಗಿತ್ತು. ವಿಜಯಪುರ, ಕಲಬುರಗಿ, ಬೀದರ್ ಹಾಗೂ ರಾಯಚೂರು ಜಿಲ್ಲೆಗಳು ಐತಿಹಾಸಿಕ, ಸಾಂಸ್ಕøತಿಕ ಹಾಗೂ ಆಡಳಿತಾತ್ಮಕವಾಗಿ ಹೈದರಾಬಾದ್-ಕರ್ನಾಟಕ ಪ್ರದೇಶದೊಂದಿಗೆ ನಿಕಟ ಸಂಬಂಧ ಹೊಂದಿವೆ. ಆದರೆ ವಿಜಯಪುರ ಜಿಲ್ಲೆ ಮಾತ್ರ 371(ಜೆ) ವಿಶೇಷ ಸ್ಥಾನಮಾನದಿಂದ ಹೊರಗುಳಿದಿದೆ ಎಂದು ಹೇಳಿದರು.
ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಿಜಯಪುರ ಜಿಲ್ಲೆ ಹಿಂದುಳಿದಿದ್ದು, ಪ್ರಾದೇಶಿಕ ಅಸಮತೋಲನ ನಿವಾರಣೆಗೆ 371(ಜೆ) ವ್ಯಾಪ್ತಿಗೆ ಸೇರ್ಪಡೆ ಅಗತ್ಯವಾಗಿದೆ. ಡಾ. ಡಿ.ಎಂ. ನಂಜುಂಡಪ್ಪ ವರದಿಯಲ್ಲಿಯೂ ವಿಜಯಪುರ ಜಿಲ್ಲೆಯ ಹಿಂದುಳಿದಿರುವಿಕೆ ದಾಖಲಾಗಿದೆ ಎಂದು ಅವರು ತಿಳಿಸಿದರು.
ವಿಜಯಪುರ ಜಿಲ್ಲೆ ಕಲ್ಯಾಣ ಕರ್ನಾಟಕ ಪ್ರದೇಶದೊಂದಿಗೆ ಆಡಳಿತಾತ್ಮಕ ಹಾಗೂ ಸಾರಿಗೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನೇರ ಸಂಪರ್ಕ ಹೊಂದಿದೆ. ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಸೌಲಭ್ಯಗಳು ಹಾಗೂ ವಿಶೇಷ ಅನುದಾನಗಳಿಂದ ಜಿಲ್ಲೆ ವಂಚಿತವಾಗಿದ್ದು, 371(ಜೆ) ತಿದ್ದುಪಡಿ ಮೂಲಕ ಜಿಲ್ಲೆಯನ್ನು ಸೇರ್ಪಡೆಗೊಳಿಸುವುದು ನ್ಯಾಯಸಮ್ಮತವಾಗಿದೆ ಎಂದು ಸಮಿತಿ ಪ್ರತಿಪಾದಿಸಿದೆ.
ವಿಜಯಪುರ ಜಿಲ್ಲೆಯ ಸುಮಾರು 25 ಲಕ್ಷ ಜನರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ, ಯುವಕರಿಗೆ ಉದ್ಯೋಗ ಮತ್ತು ನೇಮಕಾತಿಯಲ್ಲಿ ಮೀಸಲಾತಿ, ಜಿಲ್ಲೆಗೆ ವಿಶೇಷ ಅನುದಾನ ಸೇರಿದಂತೆ ಹಲವು ಪ್ರಯೋಜನಗಳು ದೊರೆಯಲಿವೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿ ಸಂವಿಧಾನದ 371(ಜೆ)ಗೆ ತಿದ್ದುಪಡಿ ತರಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬರಗಾಲಪೀಡಿತ ಪ್ರದೇಶವಾಗಿರುವ ವಿಜಯಪುರ ಜಿಲ್ಲೆಗೆ ವಿಶೇಷ ಅಭಿವೃದ್ಧಿ ಸೌಲಭ್ಯಗಳ ಅಗತ್ಯವಿದ್ದು, ದೀರ್ಘಕಾಲದ ಪ್ರಾದೇಶಿಕ ಹಿಂದುಳಿದಿರುವಿಕೆಯನ್ನು ನಿವಾರಿಸಲು 371(ಜೆ) ಮೀಸಲಾತಿ ಪ್ರಮುಖ ಸಾಧನವಾಗಲಿದೆ ಎಂದು ಹೋರಾಟಗಾರರು ಹೇಳಿದರು.
ಈ ಸಂದರ್ಭದಲ್ಲಿ ಹೋರಾಟಗಾರರಾದ ವಿನೋದ ಖೇಡ, ಎನ್. ಸುರೇಶಕುಮಾರ, ಲಾಯಪ್ಪ ಇಂಗಳೆ, ಸುರೇಶ ವಿಜಯಪುರ, ಚಂದ್ರಶೇಖರ ಹೊಸಮನಿ, ಅನಿಲ್ ಇಕ್ಕಳಕಿ, ಮಲ್ಲಿಕಾರ್ಜುನ ಬಟಗಿ, ಶರಣಗೌಡ ಪಾಟೀಲ, ಮಲ್ಲನಗೌಡ ಬಿರಾದಾರ, ಸಂಜೀವ ಪಾಟೀಲ, ನೀಲಾಂಬಿಕಾ ಬಿರಾದಾರ, ಜಗದೇವ ಸೂರ್ಯವಂಶಿ, ಎಂ.ಆರ್. ಗುರಿಕಾರ, ವಸಂತ ಬೈರಾಮಡಿ, ಗಿರೀಶ ಕಲಘಟಗಿ, ಅಂಬಣ್ಣ ಗುನ್ನಾಪುರ, ಅಶೋಕ ಚೋಳಕೆ, ಸಂತೋಷ ಕಲಗುಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜಯಪುರ ಜಿಲ್ಲೆಗೆ 371(ಜೆ) ವಿಶೇಷ ಮೀಸಲಾತಿ ದೊರಕುವವರೆಗೆ ಹೋರಾಟವನ್ನು ಮುಂದುವರಿಸುವುದಾಗಿ ಸಮಿತಿ ಮುಖಂಡರು ತಿಳಿಸಿದ್ದಾರೆ.