Home ಜಿಲ್ಲೆ ಸಾವಳಗಿ-ತುಂಗಳ ಏತ ನೀರಾವರಿ ಯೋಜನೆ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಪಂಪ್‍ಹೌಸ್‍ಗೆ ಬೀಗ ಜಡಿದು ರೈತರ...

ಸಾವಳಗಿ-ತುಂಗಳ ಏತ ನೀರಾವರಿ ಯೋಜನೆ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಪಂಪ್‍ಹೌಸ್‍ಗೆ ಬೀಗ ಜಡಿದು ರೈತರ ಪ್ರತಿಭಟನೆ

ಜಮಖಂಡಿ: ಸಾವಳಗಿ-ತುಂಗಳ ಏತ ನೀರಾವರಿ ಯೋಜನೆಯ ಕಾಲುವೆಗೆ ತಕ್ಷಣ ನೀರು ಹರಿಸುವಂತೆ ಒತ್ತಾಯಿಸಿ ಸಾವಳಗಿ ಹಾಗೂ ತುಂಗಳ ಗ್ರಾಮದ ರೈತರು ಅಥಣಿ ತಾಲ್ಲೂಕಿನ ಕೂಕಟನೂರ ಗ್ರಾಮದ ಬಳಿಯ ಪಂಪ್‍ಹೌಸ್‍ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಪಂಪ್‍ಹೌಸ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಹೊರಗೆ ಬರದಂತೆ ಒಳಗೆ ಕೂಡಿಹಾಕಿ, ಪಂಪ್‍ಹೌಸ್‍ಗೆ ಬೀಗ ಹಾಕಿದ ರೈತರು ಸ್ಥಳದಲ್ಲೇ ಧರಣಿ ನಡೆಸಿದರು.

ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ಜುಲೈ 17ರಂದು ಸಾವಳಗಿ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅಧಿಕಾರಿಗಳು ನೀರು ಹರಿಸುವ ಭರವಸೆ ನೀಡಿದ್ದರೂ ಇದುವರೆಗೆ ಕಾಲುವೆಗೆ ನೀರು ಹರಿಸದ ಹಿನ್ನೆಲೆಯಲ್ಲಿ ರೈತರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು.

ತಕ್ಷಣ ನೀರು ಹರಿಸದಿದ್ದರೆ ಉಗ್ರ ಹೋರಾಟ
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸಾವಳಗಿ-ತುಂಗಳ ಏತ ನೀರಾವರಿ ಕಾಲುವೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡರಾದ ರಾಘವೇಂದ್ರ ವಾಘಾಂಕರ ಹಾಗೂ ವೆಂಕಪ್ಪ ಗಿರಡ್ಡಿ ಎಚ್ಚರಿಸಿದರು.

ಈ ಬಾರಿ ಮುಂಗಾರು ಮಳೆ ಸಕಾಲಕ್ಕೆ ಆಗದ ಹಿನ್ನೆಲೆಯಲ್ಲಿ ಸಾವಳಗಿ ಸೇರಿದಂತೆ ಕನ್ನೊಳ್ಳಿ, ಗದ್ಯಾಳ ಹಾಗೂ ಕುರಗೋಡ ಗ್ರಾಮಗಳ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಜಮೀನುಗಳಲ್ಲಿ ಬಿತ್ತನೆ ಮಾಡಿರುವ ಬೆಳೆಗಳಿಗೆ ನೀರಿಲ್ಲದೆ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.

ಸಾವಳಗಿ-ತುಂಗಳ ಏತ ನೀರಾವರಿ ಕಾಲುವೆಗೆ ಕೂಡಲೇ ನೀರು ಹರಿಸದಿದ್ದರೆ ರೈತರು ಬೀದಿಗಿಳಿದು ಗಂಭೀರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಜಿ ಜಿ.ಪಂ ಸದಸ್ಯ ಸುರೇಶ ಮಾಳಿ, ಪಂಡಿತ ಗಿರಡ್ಡಿ, ಸದಾಶಿವ ಕಲಾಲ, ಹನುಮಂತ ಕರೋಶಿ, ರಾಜು ಮಠಪತಿ, ಸಂಗಪ್ಪ ಗಿರಡ್ಡಿ, ಶ್ರೀಮಂತ ವಾಘಾಂಕರ, ಹನುಮಂತ ಗಣಿ ಸೇರಿದಂತೆ ರೈತ ಮುಖಂಡರು ಎಚ್ಚರಿಸಿದರು.

ಪಕ್ಷಾತೀತವಾಗಿ ನಡೆದ ಪ್ರತಿಭಟನೆಗೆ ಸಾವಳಗಿ ಪಟ್ಟಣದ ಮುಖಂಡರು ಹಾಗೂ ದಸಂಸ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ, ಮಾಜಿ ಜಿ.ಪಂ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಗ್ರಾ.ಪಂ ಸದಸ್ಯ ಸುಜೀತಗೌಡ ಪಾಟೀಲ, ಮಾಜಿ ಗ್ರಾ.ಪಂ ಅಧ್ಯಕ್ಷ ಸುಭಾಷ ಪಾಟೋಳಿ, ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಪರಮಗೊಂಡ, ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೆಕರ, ಮಾಜಿ ತಾ.ಪಂ ಸದಸ್ಯ ಬಸವರಾಜ ಮಾಳಿ, ರೈತ ಮುಖಂಡರಾದ ಜನಕರಾಜ ನಾಂದ್ರೆಕರ, ತುಕಾರಾಮ ಬಾಪಕರ ಸೇರಿದಂತೆ ವಿವಿಧ ಪಕ್ಷಗಳ ಹಾಗೂ ಸಂಘಟನೆಗಳ ಮುಖಂಡರು ಬೆಂಬಲ ಸೂಚಿಸಿದರು.

ಮುಂದಿನ ಹೋರಾಟದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ದಲಿತ ಮುಖಂಡ ರಾಜು ಮೇಲಿನಕೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.