ಕೋಲಾರ,ಆ,೧೧- ಕೋಲಾರ ನಗರದ ಪ್ರಮುಖ ಬಡಾವಣೆಗಳಲ್ಲಿ ಒಂದಾಗಿರುವ ಹಾರೋಹಳ್ಳಿ ರಾಜಕಾರಣಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದು, ಇಡೀ ಬಡಾವಣೆಯಲ್ಲಿ ಕಸದ ರಾಶಿಗಳು, ತುಂಬಿದ ಚರಂಡಿಗಳಿಂದಾಗಿ ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಡುತ್ತಿದೆ ಎಂದು ಶ್ರೀನಿವಾಸ್ ಖಂಡಿಸಿದ್ದಾರೆ.
ಬಡಾವಣೆಗಳಲ್ಲಿನ ಕಸದ ರಾಶಿಗಳ ಪ್ರತ್ಯಕ್ಷ ದರ್ಶನ ಮಾಡಿಸಿರುವ ಅವರು, ಹಾರೋಹಳ್ಳಿಯಲ್ಲಿ ಪರಿಶಿಷ್ಟ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಸರ್ಕಾರ ಮತ್ತು ಶಾಸಕರು ಎಸ್ಟಿಪಿ, ಟಿಎಸ್ಪಿ ಅನುದಾನವನ್ನು ಕೋಟಿಗಟ್ಟಲೇ ಕ್ಷೇತ್ರಕ್ಕೆ ಖರ್ಚು ಮಾಡಿರುವುದಾಗಿ ಹೇಳುತ್ತಾರೆ ಆದರೆ ಇಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ
ಸಮುದಾಯದ ಅಭಿವೃದ್ದಿಗೆ ಮೀಸಲಾದ ಎಸ್ಸಿಪಿಟಿ ಅನುದಾನ ಎಲ್ಲಿ ಹರಿದು ಹೋಗುತ್ತಿದೆಯೋ ಗೊತ್ತಿಲ್ಲ, ನಮ್ಮ ಶಾಸಕರಿಗೆ ಹಾರೋಹಳ್ಳಿಯ ಜನರೂ ಮತ ಹಾಕಿದ್ದೇವೆ ಆದರೆ ಅವರು ಇಲ್ಲಿ ಯಾವುದೇ ಅಭಿವೃದ್ದಿ ಕೆಲಸ ಮಾಡುವುದನ್ನು ಮರೆತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಶಾಲೆ ಬಳಿ ಮಾತ್ರವಲ್ಲ, ಹಾರೋಹಳ್ಳಿಯ ಯಾವುದೇ ರಸ್ತೆಗೆ ಹೋದರೂ ರಸ್ತೆ ಹಾಳಾಗಿದೆ, ಕಸದ ರಾಶಿಗಳ ದರ್ಶನವಾಗುತ್ತಿದೆ,
ಸಮರ್ಪಕ ಕುಡಿಯುವ ನೀರಿನ ಪೂರೈಕೆಯೂ ಇಲ್ಲವಾಗಿದೆ, ಚರಂಡಿಗಳಲ್ಲಿ ಕೊಳಕು ತುಂಬಿದೆ ಎಂದರು.
ಕಸದ ರಾಶಿಗಳನ್ನು ತೆಗೆಯದಿದ್ದರೆ ಈ ಭಾಗದ ಜನತೆ ಸಾಂಕ್ರಾಮಿಕ ರೋಗಳಿಗೆ ತುತ್ತಾಗುವ ಆತಂಕವೂ ಇದ್ದು, ನಗರಸಭೆ ಕೂಡಲೇ ಅಗತ್ಯ ಕ್ರಮವಹಿಸಬೇಕೆಂದು ಒತ್ತಾಯಿಸಿದ್ದಾರೆ.
























