
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.03- ಬರಹಗಾರರಿಗೆ ಸಾಹಿತ್ಯ ಪರಂಪರೆಯ ಜ್ಞಾನ, ಅರಿವು ಇರಬೇಕು” ಎಂದು ಕನ್ನಡ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಬಿ. ಸೋಮಶೇಖರ್ ಅಭಿಪ್ರಾಯಪಟ್ಟರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದ ಜೆಎಸ್‍ಎಸ್ ಆಶ್ರಮದಲ್ಲಿ ಆಯೋಜಿಸಲಾಗಿದ್ದ ‘ಬರಹಗಾರರ ಸಮಾವೇಶ’ದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯದಲ್ಲಿ ಪಂಪ ರನ್ನ ಪೆÇನ್ನರು, ವಚನಕಾರರು, ದಾಸರು ಸಮಾಜಕ್ಕೆ ದಾರಿದೀಪವಾಗಿದ್ದಾರೆ.
ಅದೇ ರೀತಿಯಲ್ಲಿ ಬರಹಗಾರರು ಸಮಾಜದ ಸಾಕ್ಷಿಪ್ರಜ್ಞೆಯಾಗಿದ್ದು, ಸಮಾಜದ ತುಮುಲಗಳನ್ನು ಗುರುತಿಸಿ ಸಾಹಿತ್ಯದಲ್ಲಿ ಪ್ರತಿಬಿಂಬಿಸಬೇಕು ಎಂದು ಸಲಹೆ ನೀಡಿದರು.
ಸಾನಿಧ್ಯ ವಹಿಸಿದ್ದ ಸುತ್ತೂರು ಮಠದ ಕಿರಿಯ ಶ್ರೀ ಜಯರಾಜೇಂದ್ರ ಮಹಾಸ್ವಾಮೀಜಿ ಮಾತನಾಡಿ, ಸಾಹಿತ್ಯ ಸಮಾಜಕ್ಕೆ ಮಾರ್ಗದರ್ಶಕವಾದದ್ದು, ವಚನ ಸಾಹಿತ್ಯವನ್ನು ಮನೆ ಮನೆಗೆ, ಮನ ಮನಕ್ಕೆ ತಲುಪಿಸಲು ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರು ಶರಣ ಸಾಹಿತ್ಯ ಪರಿಷತ್ ಸ್ಥಾಪಿಸಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರು ತಮ್ಮ ಹಿರಿಯರ ಆಶಯಗಳನ್ನು ಸಮರ್ಥವಾಗಿ ನಾಡಿನಾದ್ಯಂತ ಮಾತ್ರವಲ್ಲ ದೇಶ ವಿದೇಶಗಳಲ್ಲಿ ಬೆಳಗಿಸಿದರು ಎಂದರು.
ಕವಿಗಳು ಹಾಗೂ ಬರಹಗಾರರಿಗೆ ಬಹುದೊಡ್ಡ ಜವಾಬ್ದಾರಿ ಇರುತ್ತದೆ. ಸಮಾಜದಲ್ಲಿರುವ ವಿಷಯಗಳನ್ನು ಇಟ್ಟುಕೊಂಡಿರುವ ಸಾಹಿತ್ಯವನ್ನು ರಚಿಸಿದರೂ. ಸಾಹಿತಿಗಳು ಮನುಕುಲದ ಮಾರ್ಗದರ್ಶಿಗಳು. ಜನರಿಗೆ ಸರಿ ತಪ್ಪುಗಳ ವಿವೇಚನೆಯನ್ನು ಸಾಹಿತ್ಯದ ಮೂಲಕ ತಿಳಿಸುತ್ತಾರೆ. ಸತ್ಯ- ನ್ಯಾಯ-ಮಾನವೀಯತೆಗಳ ಮೌಲ್ಯವನ್ನು ಸಮಾಜದಲ್ಲಿ ಎತ್ತಿ ಹಿಡಿಯುತ್ತಾರೆ ಎಂದರು.
ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಬಗ್ಗೆ ಸಾಹಿತ್ಯ ಸಾಮಾನ್ಯ ಜನರಿಗೆ ದಾರಿದೀಪವಾಗಬೇಕು ಎಂದು ಆಶಿಸಿದರು.
ಶಿಬಿರ ಉದ್ಘಾಟಿಸಿದ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಎಂ. ನಂಜುಂಡಸ್ವಾಮಿ ಮಾತನಾಡಿ, ಬರಹಗಾರರು, ಸಾಹಿತಿಗಳ ಪಾತ್ರ ಸಮಾಜದಲ್ಲಿ ಬಹಳ ದೊಡ್ಡದು. 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನೂರಾರು ಜನ ಕಾಯಕ ಜೀವಿಗಳು ಅನಕ್ಷರಸ್ಥರಾದರೂ ವಚನ ಸಾಹಿತ್ಯವನ್ನು ರಚಿಸಿದರು. ಅವರು ತಮ್ಮ ಅನುಭವವನ್ನು ಅನುಭಾವವಾಗಿಸಿಕೊಂಡಿದ್ದವರು. ಅಂತಹ ಸಾಹಿತ್ಯವನ್ನು ಇಂದಿನ ತಲೆಮಾರಿನವರು ರಚಿಸುವಂತಾಗಬೇಕು ಎಂದು ಹೇಳಿದರು.
ರಾಜೇಂದ್ರ ಶ್ರೀ ದೂರದೃಷ್ಟಿ: ಪ್ರಾಸ್ತಾವಿಕವಾಗಿ ಮಾತನಾಡಿದ, ಜಿಲ್ಲಾ ಶಸಾಪ ಅಧ್ಯಕ್ಷ ಬಿ.ಕೆ.ರವಿಕುಮಾರ್, ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಶರಣ ಸಾಹಿತ್ಯವನ್ನು ಪ್ರಚಾರ ಪ್ರಸಾರ ಮಾಡುವ ಸಲುವಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅನ್ನು 1986 ರಲ್ಲಿ ಸ್ಥಾಪಿಸಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾರ್ಗದರ್ಶನದಲ್ಲಿ ಪರಿಷತ್ತು ಹಲವು ಸಮಾಜೋಪಯೋಗಿ ಕಾರ್ಯಗಳನ್ನು ನಡೆಸುತ್ತಿದೆ ಎಂದು ಹೇಳಿದರು. ಬರಹಗಾರರು ಸಾಹಿತಿಗಳು ಸಮಾಜದ ಸಮಸ್ಯೆಗಳು ಹಾಗೂ ಪ್ರಚಲಿತ ಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮು.ನಾ.ರಮೇಶ, ಸ್ವಾಮಿ ಪೆÇನ್ನಾಚಿ, ಪೆÇ್ರ. ಪ್ರಸನ್ನ ಸಂತೆಕಡೂರು, ಡಿ. ಎನ್. ಲೋಕಪ್ಪ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಆಲಮಟ್ಟಿ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮೀಜಿ, ನಿಕಟಪೂರ್ವ ಅಧ್ಯಕ್ಷ ವಿ.ಮಲ್ಲಿಕಾರ್ಜುನ ಸ್ವಾಮಿ ದುಗ್ಗಹಟ್ಟಿ, ನಾಗರಾಜು ಕೂಂಗರಹಳ್ಳಿ, ನಂದೀಶ್ ರಾಮಾಪುರ, ಬಿ.ಎಸ್. ವಿನಯ್, ಶಿವಕುಮಾರ ಸ್ವಾಮಿ, ವೀರಭದ್ರ ಸ್ವಾಮಿ, ಶಿವಾಲಂಕಾರ್, ಸುಂದರ್, ಲಿಂಗರಾಜು ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.

































