
ಚೇಳೂರು, ಜು. ೨೮- ವೀರಶೈವ ಲಿಂಗಾಯತ ಸಮಾಜದಲ್ಲಿರುವ ರಾಜಕಾರಣಿಗಳು, ನೌಕರ ವರ್ಗದವರು ಮತ್ತು ಶ್ರೀಮಂತರು ವಿಶಾಲವಾದ ಮನಸ್ಸು ಮಾಡಿದರೆ ಇಂತಹ ಕಾರ್ಯಕ್ರಮಗಳು ವಿಶ್ವಕ್ಕೆ ಮಾದರಿಯಾಗುತ್ತದೆ ಎಂದು ಬೆಟ್ಟದಹಳ್ಳಿ ಗವಿ ಮಠ ಅಧ್ಯಕ್ಷ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಗುಬ್ಬಿ ತಾಲ್ಲೂಕಿನ ಹೇರೂರಿನಲ್ಲಿರುವ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ ನಿವೃತ್ತ ನೌಕರರಿಗೆ ಮತ್ತು ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು
ವೀರಶೈವ ಸಮಾಜವು ಎಲ್ಲ ಸಮುದಾಯಗಳ ಜತೆ ಬೆರೆತು ಸಾಗುವ ಕೆಲಸ ಮಾಡಬೇಕು. ನಮ್ಮ ಸಮಾಜದಲ್ಲಿರುವ ಅಧಿಕಾರಿ ವರ್ಗದವರು, ರಾಜಕಾರಣಿಗಳು ಮತ್ತು ಶ್ರೀಮಂತ ವರ್ಗದವರು ನಮ್ಮ ಸಮಾಜದ ಪ್ರಗತಿಯ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕೆಲಸವನ್ನು ಕಳೆದ ೨೦ ವರ್ಷಗಳಿಂದ ನಡೆಸುತ್ತಾ ಬಂದಿದ್ದೇವೆ ಎಂದರು.
ದೊಡ್ಡಗುಣಿಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ನೌಕರರ ಸಂಘ ವೀರಶೈವ ಪ್ರತಿಭಾನ್ವಿತ ಮಕ್ಕಳಿಗೆ ಬಲ ತುಂಬುವ ಕೆಲಸ ಮಾಡುತ್ತದೆ, ಶಿಕ್ಷಣದ ಜತೆಗೆ ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಂಡು ಸಾಗಬೇಕು ಎಂದರು.
ಕೆಎಎಸ್ ಅಧಿಕಾರಿ ಹೆಚ್.ಪಿ. ಸೋಮಶೇಖರ್ ಮಾತನಾಡಿ, ಆಧುನಿಕತೆಗೆ ತಕ್ಕಂತೆ ಕೌಶಲ್ಯ ಬೆಳೆಸುವ ಶಿಕ್ಷಣದತ್ತ ಕೆಲಸ ಮಾಡಬೇಕಾಗುತ್ತದೆ. ಎಲ್ಲ ಕ್ಷೇತ್ರದಲ್ಲೂ ಅವಕಾಶ ಇರುವಾಗ ಡಾಕ್ಟರ್, ಇಂಜಿನಿಯರ್ ಈ ಎರಡು ಮಾತ್ರ ಆಯ್ಕೆ ಏಕೆಂಬುದು ತಿಳಿಯುತ್ತಿಲ್ಲ. ಕೇಂದ್ರದಲ್ಲಿ ನಮ್ಮ ವೀರಶೈವ ಲಿಂಗಾಯಿತರಿಗೆ ಓಬಿಸಿ ಮೀಸಲಾತಿ ಇರುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಗುಬ್ಬಿ ಘಟಕದ ಅಧ್ಯಕ್ಷರಾದ ಎಚ್ ಸಿ,ಸೋಮಶೇಖರ್, ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ, ಮುಖಂಡರಾದ ಎಸ್ ಡಿ ದಿಲೀಪ್‌ಕುಮಾರ್, ಚಂದ್ರಶೇಖರ್‌ಬಾಬು, ಶಶಿ ಹುಲಿಕುಂಟೆಮಠ್, ಷಡಕ್ಷರಿ, ಉಮೇಶ್, ಸಿ.ಎಂ. ಹರೀಶ್, ಹೊಸಳ್ಳಿ ಗಿರೀಶ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.


































