Home ಜಿಲ್ಲೆ ತುಮಕೂರು ಹುಲಿಬೆಟ್ಟದ ತಪ್ಪಲಿಗೆ ಹರಿದು ಬಂದ ಭಕ್ತ ಸಾಗರ.. ಕಡಮಲಕುಂಟೆ ಓಬಳಲಕ್ಷ್ಮೀ ನರಸಿಂಹಸ್ವಾಮಿ ಅದ್ದೂರಿ ಜಾತ್ರೆ

ಹುಲಿಬೆಟ್ಟದ ತಪ್ಪಲಿಗೆ ಹರಿದು ಬಂದ ಭಕ್ತ ಸಾಗರ.. ಕಡಮಲಕುಂಟೆ ಓಬಳಲಕ್ಷ್ಮೀ ನರಸಿಂಹಸ್ವಾಮಿ ಅದ್ದೂರಿ ಜಾತ್ರೆ

Oplus_131072

ಪಾವಗಡ, ಜು. ೨೮- ತಾಲ್ಲೂಕಿನ ಕಡಮಲಕುಂಟೆ ಗ್ರಾಮದ ನಿಸರ್ಗ ರಮಣೀಯ ಹುಲಿ ಬೆಟ್ಟದ ತಪ್ಪಲು ಭಕ್ತಿ ಸಾಗರದಲ್ಲಿ ತೇಲಲಾಯಿತು. ಪ್ರಸಿದ್ಧ ಶ್ರೀ ಓಬಳಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಏಕಾದಶಿ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ಜಾತ್ರಾ ಮಹೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.


ಬೆಳಗ್ಗಿನಿಂದಲೇ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಸಂಜೆಯಾಗುತ್ತಿದ್ದಂತೆ ಧಾರ್ಮಿಕ ಆಚರಣೆಗಳು ತಾರಕಕ್ಕೇರಿದವು. ವಿಶೇಷವಾಗಿ ಗೊರವಯ್ಯರು ತಮ್ಮ ಪಾರಂಪರಿಕ ವೇಷಭೂಷಣ ತೊಟ್ಟು, ದೇವರ ಪದಗಳನ್ನು ಹಾಡುತ್ತಾ ಜಾನಪದ ನೃತ್ಯದೊಂದಿಗೆ ನಡೆಸಿಕೊಟ್ಟ ’ಹಾಲು ಕುಡಿಯುವ ಸೇವೆ’ ಸಾರ್ವಜನಿಕರ ವಿಶೇಷ ಗಮನ ಸೆಳೆಯಿತು


ಸಂಪ್ರದಾಯದಂತೆ ದೇವಸ್ಥಾನದ ಪ್ರದಕ್ಷಿಣೆ, ದೇವಸ್ಥಾನ ಸುತ್ತಲೂ ಕುರಿಗಳನ್ನು ಸುತ್ತಿಸಿ ಪೂಜೆ ಸಲ್ಲಿಸುವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು. ಕಡಮಲಕುಂಟೆ ಸೇರಿದಂತೆ ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ದೇವರ ದರ್ಶನ ಪಡೆದು ಧನ್ಯತೆ ಮೆರೆದರು.


ಜಾತ್ರೋತ್ಸವದ ಎರಡನೇ ದಿನದಂದು ಶ್ರೀ ದೇವರ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.