Home ಜಿಲ್ಲೆ ತುಮಕೂರು ಹುತಾತ್ಮ ಯೋಧರ ಸೇವೆ ಚಿರಸ್ಥಾಯಿ

ಹುತಾತ್ಮ ಯೋಧರ ಸೇವೆ ಚಿರಸ್ಥಾಯಿ

ಅರಸೀಕೆರೆ, ಜು. ೨೭- ನಗರದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಮಾಜಿ ಸೈನಿಕ ಸಮನ್ವಯ ಸಮಿತಿ ವತಿಯಿಂದ ಕಾರ್ಗಿಲ್ ವಿಜಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ತಾಲ್ಲೂಕು ದಂಡಾಧಿಕಾರಿ ಸಂತೋಷ್ ಕುಮಾರ್ ಅವರು ಜ್ಯೋತಿ ಬೆಳಗಿಸಿ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.


ನಂತರ ಮಾತನಾಡಿದ ಅವರು, ಕಾರ್ಗಿಲ್ ಸಮಯದಲ್ಲಿ ದೇಶಕ್ಕೋಸ್ಕರ ತಮ್ಮ ಪ್ರಾಣ ಬಲಿದಾನ ಮೂಲಕ ನಿಸ್ವಾರ್ಥ ಸೇವೆಯೊಂದಿಗೆ ತಮ್ಮನ್ನು ತಾವು ಈ ಭಾರತಾಂಬೆಯ ಮಡಿಲಿಗೆ ಅರ್ಪಿಸಿಕೊಂಡ ನೂರಾರು ಸೈನಿಕರ ಸೇವೆಯನ್ನು ಮರೆಯಲಾಗುವುದಿಲ್ಲ ಎಂದರು.


ಇಂದಿಗೂ ಕೂಡ ಗಡಿ ಭಾಗದಲ್ಲಿ ತಮ್ಮ ಕುಟುಂಬ ತೊರೆದು ದೇಶದ ಗಡಿ ರಕ್ಷಣೆಯಲ್ಲಿ ತೊಡಗಿರುವ ಸೈನಿಕರಿಗೆ ನಮಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ತಿಳಿಸಿದರು.


ತಾವೆಲ್ಲರೂ ತಮ್ಮ ಸೇವಾ ಅವಧಿಯಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿ ದೇಶಕ್ಕೆ ತಮ್ಮ ಕೊಡುಗೆಯನ್ನು ಸಲ್ಲಿಸಿದ್ದೀರಿ, ದೇಶದ ಸೈನಿಕರಿಗೆ ತಾಲೂಕು ಕಚೇರಿ ತಮ್ಮ ಕಾರ್ಯಗಳಿಗೆ ಯಾವಾಗಲೂ ತೆರೆದಿರುತ್ತದೆ. ತಮ್ಮ ನೋವು-ನಲಿವುಗಳಿಗೆ ನಾವು ಭಾಗಿಯಾಗುತ್ತೇವೆ ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ಸೈನಿಕರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ತಾಲ್ಲೂಕು ದಂಡಾಧಿಕಾರಿ ಮುಂದಿನ ದಿನಗಳಲ್ಲಿ ಮಾಜಿ ಸೈನಿಕರ ಸಂಘದ ಬೇಡಿಕೆಗಳಿಗೆ ಶೀಘ್ರವಾಗಿ ಸ್ಪಂದಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಹಬ್ಬನಘಟ್ಟ, ಜಿಲ್ಲಾ ನಿರ್ದೇಶಕ ಮಹೇಶ್, ಖಜಾಂಚಿ ಅಣ್ಣೇಗೌಡ, ವೆಂಕಟೇಶ್, ನಾಗಭೂಷಣ್, ಲೋಹಿತ್ ಮತ್ತಿತರರು ಉಪಸ್ಥಿತರಿದ್ದರು.