
ಬೀದರ್: ಜು.12:ಮಳೆ ಕೊರತೆ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಿಸಬೇಕು ಎಂದು ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೋವಿಂದ್ ಸಿಂಗ್ ಠಾಕೂರ್ ಆಗ್ರಹಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಾಗಿದ್ದರಿಂದ ಜಿಲ್ಲೆಯಲ್ಲಿ ಅನೇಕ ಕಡೆ ಬಿತ್ತನೆಯಾಗಿಲ್ಲ. ಬಿತ್ತಿದ ಬೀಜಗಳು ಪೂರ್ಣ ಪ್ರಮಾಣದಲ್ಲಿ ಮೊಳಕೆಯೊಡೆದಿಲ್ಲ. ಇನ್ನು ಕೆಲ ದಿನಗಳ ವರೆಗೆ ಮಳೆ ಬಾರದಿದ್ದರೆ ಬೆಳೆ ಸಂಪೂರ್ಣ ಹಾಳಾಗಲಿದೆ. ಅನೇಕ ಕಡೆ ಈಗಾಗಲೇ ಜಾನುವಾರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ತಿಳಿಸಿದ್ದಾರೆ.
ಮಳೆ ಬಂದರೂ ಬೆಳೆಗಳ ಇಳುವರಿ ಕುಂಠಿತವಾಗಲಿದೆ. ಕೃಷಿಗಾಗಿ ಮಾಡಿದ ಖರ್ಚು ಕೂಡ ಮರಳುವುದು ಕಷ್ಟಸಾಧ್ಯವಾಗಿದೆ. ಸಾಲ ಮಾಡಿ, ಬೀಜ, ರಸಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ರೈತರ ಆತ್ಮಹತ್ಯೆಗಳು ಆಗಲಿವೆ. ಹೀಗಾಗಿ ಕೂಡಲೇ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಿಸಿ, ರೈತರಿಗೆ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.






























