
ಹೊಸಪೇಟೆ. ಜೂ.೨೫ ತುಂಗಭದ್ರಾ ಜಲಾಶಯಕ್ಕೆ ನೂತನವಾಗಿ ಅಳವಡಿಸಲಾದ ೩೩ ಕ್ರಸ್ಟ್ ಗೇಟುಗಳನ್ನು ಇಂದು ಲೋಕಾರ್ಪಣೆ ಗೊಳಿಸಲಾಯಿತು.
ತುಂಗಭದ್ರಾ ಜಲಾಶಯದ ಮೇಲೆ ಇಂದು ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ೧೮ ನಂಬರಿನ ಗೇಟ್ ಉದ್ಘಾಟಿಸಿದರೆ, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ೧೭ನೇ ನಂಬರಿನ ಗೇಟನ್ನು ಉದ್ಘಾಟಿಸಿದರು. ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ೧೯ನೇ ನಂಬರಿನ ಗೇಟನ್ನು ಹಾಗೂ ತೆಲಂಗಾಣ ಸಿಎಂ ಎ.ರೇವಂತರೆಡ್ಡಿ ೨೦ ನೇ ನಂಬರಿನ ಗೇಟನ್ನು ಉದ್ಘಾಟಿಸಿದರು.
ಸಿಎಂ ಡಿ.ಕೆ.ಶಿವಕುಮಾರ್, ಗಂಗಾಧರ ಅಜ್ಜಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನೂತನ ಗೇಟುಗಳನ್ನು ಲೋಕಾರ್ಪಣೆ ಗೊಳಿಸಿದರು.
ಒಂದೇ ಕಾರಿನಲ್ಲಿ ಆಗಮಿಸಿದ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮೂವರು ಸಿಎಂ ಗಳು ಗೇಟುಗಳಿಗೆ ಪೂಜೆ ಸಲ್ಲಿಸಿ ಬಟನ್ ಒತ್ತುವ ಮೂಲಕ ನೂತನ ಕ್ರಸ್ಟ್ ಗೇಟುಗಳನ್ನು ಲೋಕಾರ್ಪಣೆ ಗೊಳಿಸಿದರು.
ಒಂದೊಂದು ಗೇಟ್ ಗೂ ಒಬ್ಬೊಬ್ಬ ಅರ್ಚಕರಿಂದ ಪ್ರತ್ಯೇಕ ಪೂಜೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಲಾಶಯದ ಗೇಟುಗಳ ಅಳವಡಿಕೆ ಹಾಗೂ ಗುಣಮಟ್ಟ ಕುರಿತು ಜಲಾಶಯದ ತಜ್ಞ ಕನ್ನಯ್ಯನಾಯ್ಡು ಹಾಗು ತುಂಗಭದ್ರಾ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಂಸದರಾದ ಈ.ತುಕಾರಾಂ, ರಾಜಶೇಖರ್ ಹಿಟ್ನಾಳ್, ಮಾಜಿ ಸಚಿವರಾದ ಹೆಚ್.ಕೆ.ಪಾಟೀಲ್, ಶಿವರಾಜ್ ತಂಗಡಗಿ, ಬೋಸರಾಜ್, ವಿಜಯನಗರ ಶಾಸಕ ಹೆಚ್.ಆರ್.ಗವಿಯಪ್ಪ,ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ, ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ, ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ, ವಿಜನಗರ ಡಿಸಿ ಕವಿತಾ ಎಸ್.ಮನ್ನಿಕೇರಿ, ಎಸ್ಪಿ ಎಸ್.ಜಾಹ್ನವಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.



























