
ಬೆಂಗಳೂರು,ಜೂ.೨೫-ಬೆಳ್ಳಿ ಅಂಗಡಿಯ ಗೋಡೆ ಕೊರೆದು ೧೦ ಕೆಜಿ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದ ಖದೀಮನನ್ನು ಹಲಸೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಶಂಕರಪುರಂನ ತೇಜ(೧೯) ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ ೧೨.೫೦ ಲಕ್ಷ ಮೌಲ್ಯದ ೫ ಕೆಜಿ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಹಲಸೂರಿನ ಕಾರ್ ಸ್ಟ್ರೀಟ್ ಬಳಿಯ ಬೆಳ್ಳಿ ಅಂಗಡಿಗೆ ಕಳೆದ ಏ.೨೯ ರಂದು ಗೋಡೆ ಕೊರೆದು ಒಳನುಗ್ಗಿ ಅಂಗಡಿಯಲ್ಲಿಟ್ಟಿದ್ದ ೧೦ ಕೆಜಿ ತೂಕದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿತ್ತು.
ಈ ಸಂಬಂಧ ಅಂಗಡಿಯ ಮಾಲೀಕರು ನೀಡಿದ ದೂರು ಆಧರಿಸಿ ಕನ್ನಕಳವು ಪ್ರಕರಣ ದಾಖಲಿಸಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿಯನ್ನು ಕಲೆಹಾಕಿ ತಮಿಳುನಾಡಿನ ಶಂಕರಪುರಂನಲ್ಲಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯನ್ನು ಸುದೀರ್ಘ ವಿಚಾರಣೆ ನಡೆಸಿದಾಗ, ಕಳವು ಮಾಡಿದ ಬೆಳ್ಳಿಯ ಆಭರಣಗಳನ್ನು ತಮಿಳುನಾಡಿನ ಮದನೂರಿನ ಜ್ಯುವಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ.
ಆರೋಪಿಯು ನೀಡಿದ ಮಾಹಿತಿ ಮೇರೆಗೆ ತಮಿಳುನಾಡಿನ ಮದನೂರಿನ ಜ್ಯುವಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದ ೫ ಕೆ.ಜಿ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡು ಉಳಿದ ಆಭರಣಗಳ ಪತ್ತೆಗೆ ತನಿಖೆಯನ್ನು ಮುಂದುವರೆಸಲಾಗಿದೆ.
ಪೂರ್ವ ವಿಭಾಗದ ಡಿಸಿಪಿ ವಿಕ್ರಮ ಆಮಟೆ ಮಾರ್ಗದರ್ಶನದಲ್ಲಿ ಹಲಸೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹಾಲಪ್ಪ ವೈ ಬಾಲದಂಡಿ ಮತ್ತವರ ಸಿಬ್ಬಂದಿ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.



























