
ಬೆಂಗಳೂರು,ಜೂ.೨೫-ಉದ್ಯಮಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದ ಉದ್ಯಮಿ ವೈಶಾಖ್ ಅವರು ನಟಿ ಹಾಗೂ ಬಿಗ್‌ಬಾಸ್ ಮಾಜಿ ಸ್ಪರ್ಧಿ ಕೃಷಿ ತಾಪಂಡ ಅವರ ರಾಜರಾಜೇಶ್ವರಿ ನಗರದಲ್ಲಿರುವ ಎಲಿಗೆಂಟ್ ಟೆರೇಸ್ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಿರಿನಗರದ ಉದ್ಯಮಿ ವೈಶಾಖ್ ಕೆಲ ತಿಂಗಳ ಹಿಂದೆ ಉದ್ಯಮಿ ಅರವಿಂದ ರೆಡ್ಡಿಗೆ ಬೆದರಿಕೆ ಪ್ರಕರಣದಡಿ ಹೆಚ್‌ಎಎಲ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು,ಕೆಲ ದಿನಗಳ ಬಳಿಕ ಜಾಮೀನು ಪಡೆದು ಹೊರಬಂದಿದ್ದ ಅವರು ನಿನ್ನೆ ರಾತ್ರಿ ನಟಿ, ಸ್ನೇಹಿತೆ ಕೃಷಿ ತಾಪಂಡ ಅವರ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರಿಗೆ ೧೫ ವರ್ಷಗಳ ಹಿಂದೆ ಮದುವೆಯಾಗಿದ್ದು, ಮಗ ಹಾಗೂ ಪತ್ನಿಯೊಂದಿಗೆ ವಾಸವಿದ್ದರು. ಕಾರ್ ಗ್ಯಾರೇಜ್ ಹಾಗೂ ಆಟೊಮೊಬೈಲ್ ಶಾಪ್‌ನ ಮಾಲೀಕರಾಗಿದ್ದರು.
ರಾಜರಾಜೇಶ್ವರಿ ನಗರದಲ್ಲಿರುವ ಎಲಿಗೆಂಟ್ ಟೆರೇಸ್ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನಲ್ಲಿ ನಿನ್ನೆ ರಾತ್ರಿ ಕೃಷಿ ಮನೆಯಲ್ಲೇ ವೈಶಾಕ್ ತಂಗಿದ್ದು, ಆ ಸಮಯದಲ್ಲಿ ನಟಿ ಕೃಷಿ ಮನೆಯಲ್ಲಿರಲಿಲ್ಲ. ಈ ವೇಳೆ ನಟಿಗೆ ಕರೆ ಮಾಡಿ ತಾನು ಸಾಯುವುದಾಗಿ ವೈಶಾಕ್ ಹೇಳಿಕೊಂಡಿದ್ದ. ತಕ್ಷಣ ಕೃಷಿ ಈ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಿದ್ದರು.
ಆ ಬಳಿಕ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೊರಿಯರ್ ಬೆದರಿಕೆ:
ಕಳೆದ ಫೆಬ್ರವರಿಯಲ್ಲಿ ಉದ್ಯಮಿ ಅರವಿಂದ ರೆಡ್ಡಿ ಅವರಿಗೆ ಅನಾಮಧೇಯ ಹೆಸರಿನಲ್ಲಿ ಬೆದರಿಕೆ ಪತ್ರವೊಂದು ಬಂದಿತ್ತು. ಬ್ಲೂ ಡಾರ್ಟ್ ಕೊರಿಯರ್ ಮುಖಾಂತರ ಈ ಪತ್ರವನ್ನು ಕಳುಹಿಸಲಾಗಿತ್ತು. ಪತ್ರದಲ್ಲಿ ಕೋಟ್ಯಂತರ ರೂಗಳ ಹಣಕ್ಕೆ ಬೇಡಿಕೆ ಇಡಲಾಗಿತ್ತು.
ಇತ್ತೀಚೆಗೆ ಕೃಷಿ ತಾಪಂಡ ಅವರು ಅರವಿಂದ ರೆಡ್ಡಿ ವಿರುದ್ಧ ದೂರು ನೀಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಶಾಕ್, ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ಬರೆದು ಕೋಟ್ಯಂತರ ಬೇಡಿಕೆ ಇಟ್ಟು,ಕೃಷಿ ಜೊತೆ ಇರುವ ಸಮಸ್ಯೆಯನ್ನು ನೀನು ತಕ್ಷಣ ಬಗೆಹರಿಸಿಕೊಳ್ಳಬೇಕು. ಅದರೊಂದಿಗೆ ಕ್ಷಮಾಪಣೆ ಪತ್ರ ಮತ್ತು ೬ ರಿಂದ ೭ ಕೋಟಿ ರೂ ಹಣವನ್ನು ಕಳುಹಿಸಬೇಕು,ಇಲ್ಲವಾದಲ್ಲಿ ನೀನು ಬೇರೆ ಬೇರೆ ರೀತಿಯ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿತ್ತು. ಈ ಪತ್ರವನ್ನು ನೋಡಿ ಆತಂಕಗೊಂಡ ಅರವಿಂದ ರೆಡ್ಡಿ ಅವರು ಪೊಲೀಸರಿಗೆ ದೂರು ನೀಡಿದ್ದರು.
ಸಿಕ್ಕಿಬಿದ್ದಿದ್ದ ವೈಶಾಕ್:
ಅರವಿಂದ ರೆಡ್ಡಿ ನೀಡಿದ ದೂರಿನ ಮೇರೆಗೆ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು ಬೆದರಿಕೆ ಹಾಕಿದ್ದ ವೈಶಾಕ್ ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಘಟನೆ ಸಂಬಂಧ ವೈಶಾಖ್ ತಂದೆ ನೀಡಿದ ದೂರಿನ ಮೇರೆಗೆ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿ ರಾಜರಾಜೇಶ್ವರಿನಗರ ಪೊಲೀಸರು ತನಿಖೆಯನ್ನು ಕೈಗೊಂಡಿದ್ದು, ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿಲ್ಲ ಎಂದು ತಿಳಿದುಬಂದಿದೆ.
ನಟಿ ಮನವೊಲಿಕೆ ವಿಫಲ
ಗೆಳೆಯ ಉದ್ಯಮಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ವಿಚಾರವನ್ನು ನಟಿ ಕೃಷಿ ತಾಪಂಡ ಅವರೇ ಪೊಲೀಸರಿಗೆ ತಿಳಿಸಿರುವುದು ಪತ್ತೆಯಾಗಿದೆ.
ಗೆಳೆಯ ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿ ನೆಲಮಂಗಲದಲ್ಲಿದ್ದ ನಟಿ ಕೃಷಿ ಅವರಿಗೆ ವೈಶಾಖ್ ಕರೆ ಮಾಡಿದ್ದರು. ಆದರೆ ನಟಿ ಕಾಲ್ ರಿಸಿವ್ ಮಾಡಿರಲಿಲ್ಲ. ರಾತ್ರಿ ೮:೩೦ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೈಶಾಖ್ ಮೆಸೇಜ್ ಕಳಿಸಿದ್ದರು.
ಮೆಸೇಜ್ ಕಂಡ ತಕ್ಷಣ ವೈಶಾಖ್ ಮನೆಯವರಿಗೆ ಕೃಷಿ ತಾಪಂಡ ತಿಳಿಸಿದ್ದು ಅವರು ಆರ್‌ಆರ್ ನಗರದ ಬಿ ಬ್ಲಾಕ್ ೪ನೇ ಫ್ಲೋರ್‌ನ ೪೦೩ನೇ ಫ್ಲಾಟ್‌ಗೆ ಹೋಗಿ ನೋಡುವಷ್ಟರಲ್ಲಿ ವೈಶಾಖ್ ಆತ್ಮಹತ್ಯೆಗೆ ಶರಣಾಗಿದ್ದರು.
ಅನೇಕ ದಿನಗಳಿಂದ ಇದೇ ನಿವಾಸದಲ್ಲಿದ್ದ ವೈಶಾಕ್ ವಾಸವಾಗಿದ್ದರು. ಇಬ್ಬರ ಬಳಿಯೂ ಮನೆಯ ಕೀ ಇತ್ತು ಎಂದು ತಿಳಿದು ಬಂದಿದೆ. ಸಧ್ಯಕ್ಕೆ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಮೊಬೈಲ್‌ನಲ್ಲೂ ಯಾವುದೇ ವಿಡಿಯೋವನ್ನೂ ಮಾಡಿಲ್ಲ.
ಮೆಸೆಜ್ ಮಾಡಿದ ಬಳಿಕ ವೈಶಾಖ್ ಜೊತೆ ಮಾತಾಡಿದ್ದರು. ಈ ವೇಳೆ ಮನವೊಲಿಕೆಗೆ ಪ್ರಯತ್ನ ಮಾಡಿದ್ದರು. ಈ ವೇಳೆ ಕುಕ್ಕೆಗೆ ಹೋಗೋಣ ಬಾ ಎಂದಿದ್ದ ವೈಶಾಕ್, ಆಯ್ತು ನಾನು ಬರ್ತೀನಿ ಎಂದು ಕೃಷಿ ಹೇಳಿದ್ದರು.
ಮಧ್ಯರಾತ್ರಿ ೧೨ ಗಂಟೆಗೆ ನಟಿ ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಬಳಿಕ ಈ ಬಗ್ಗೆ ನಟಿ ಪೊಲೀಸರಿಗೆ ಮಾಹಿತಿ ನೀಡಿದ್ದರು.



























