
ಯಾದಗಿರಿ:ಜೂ.೧೭: ನ್ಯಾಯಾಲಯಗಳಲ್ಲಿ ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ತ್ವರಿತವಾಗಿ ಹಾಗೂ ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಜುಲೈ ೧೧ರಂದು ದೇಶಾದ್ಯಂತ ನಡೆಯುವ ರಾಷ್ಟ್ರೀಯ ಲೋಕ ಅದಾಲತ್‌ಗೆ ಯಾದಗಿರಿ ಜಿಲ್ಲೆಯಲ್ಲೂ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಚ್.ಜೆ. ಮರುಳಸಿದ್ದಾರಾಧ್ಯ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ಮೆಟ್ಟಿಲೇರಿರುವ ಪ್ರಕರಣಗಳನ್ನು ದೀರ್ಘಕಾಲ ಮುಂದುವರಿಸುವ ಬದಲು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಲೋಕ ಅದಾಲತ್ ಪರಿಣಾಮಕಾರಿ ವೇದಿಕೆಯಾಗಿದೆ ಎಂದರು.
ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಪ್ರಸ್ತುತ ೧೯,೫೭೯ ಪ್ರಕರಣಗಳು ಬಾಕಿ ಇದ್ದು, ಅವುಗಳಲ್ಲಿ ೧,೧೧೩ ಪ್ರಕರಣಗಳನ್ನು ಜುಲೈ ೧೧ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಗುರುತಿಸಲಾಗಿದೆ. ನಿಗದಿತ ದಿನಾಂಕದವರೆಗೆ ಇನ್ನಷ್ಟು ಪ್ರಕರಣಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಗುರುತಿಸಲಾದ ಪ್ರಕರಣಗಳ ಕಕ್ಷಿದಾರರು ಹಾಗೂ ವಕೀಲರು ಲೋಕ ಅದಾಲತ್‌ನಲ್ಲಿ ಭಾಗವಹಿಸಿ ಪರಸ್ಪರ ಒಪ್ಪಂದದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದರಿಂದ ಸಮಯ, ಹಣ ಹಾಗೂ ಶ್ರಮ ಉಳಿಯುವುದರ ಜೊತೆಗೆ ಪ್ರಕರಣಗಳ ಶೀಘ್ರ ಇತ್ಯರ್ಥ ಸಾಧ್ಯವಾಗಲಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಲೋಕ ಅದಾಲತ್ ಜೊತೆಗೆ ಜುಲೈ ೧೮ರಂದು ಚೆಕ್ ಬೌನ್ಸ್ ಪ್ರಕರಣಗಳ ಇತ್ಯರ್ಥಕ್ಕಾಗಿ ವಿಶೇಷ ಲೋಕ ಅದಾಲತ್ (ಡ್ರೈವ್-೨.೦) ಆಯೋಜಿಸಲಾಗುತ್ತಿದೆ. ಜುಲೈ ೧೫ರಂದು ಮಧ್ಯಸ್ಥಿಕೆ ಕೇಂದ್ರದ ಮುಂದೆ ಬಾಕಿ ಇರುವ ಪ್ರಕರಣಗಳನ್ನು ಕೈಗೆತ್ತಿಕೊಂಡು ಪರಿಹರಿಸಲಾಗುವುದು ಎಂದು ಮಾಹಿತಿ ನೀಡಿದರು.
ಯಾದಗಿರಿ ಜಿಲ್ಲೆಗೆ ಸಂಬAಧಿಸಿದAತೆ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ೧೮ ಪ್ರಕರಣಗಳನ್ನು ಇತ್ಯರ್ಥಪಡಿಸಲು ನಿರ್ದೇಶನ ಬಂದಿದೆ. ಈ ಪ್ರಕರಣಗಳನ್ನು ಜುಲೈ ೨೧, ೨೨ ಮತ್ತು ೨೩ರಂದು ನಡೆಯುವ ವಿಶೇಷ ವಿಚಾರಣೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ಸಂಬAಧಪಟ್ಟ ಕಕ್ಷಿದಾರರಿಗೆ ವಿಚಾರಣೆ ದಿನಾಂಕದ ಬಗ್ಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾತನಾಡಿ, ಸಂಚಾರ ನಿಯಮ ಉಲ್ಲಂಘನೆಗೆ ಸಂಬAಧಿಸಿದ ಇ-ಚಲನ್ ಪ್ರಕರಣಗಳ ದಂಡ ಪಾವತಿಗೆ ಸಾರ್ವಜನಿಕರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜೂನ್ ೨೧ರಿಂದ ಜುಲೈ ೧೦, ೨೦೨೬ರವರೆಗೆ ಬಾಕಿ ಇರುವ ಇ-ಚಲನ್ ದಂಡವನ್ನು ಪಾವತಿಸಿದರೆ ವಿಧಿಸಿರುವ ದಂಡದ ಮೊತ್ತದಲ್ಲಿ ಶೇ.೫೦ ರಿಯಾಯಿತಿ ನೀಡಲಾಗುವುದು ಎಂದರು.
ಅಕ್ಟೋಬರ್ ೧, ೨೦೨೫ರಿಂದ ಮೇ ೩೧, ೨೦೨೬ರವರೆಗೆ ಯಾದಗಿರಿ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬAಧ ೧೨,೧೧೯ ಇ-ಚಲನ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ?೬೭,೯೧,೯೦೦ ದಂಡ ವಿಧಿಸಲಾಗಿದೆ. ಇದರಲ್ಲಿ ?೬,೪೦,೨೦೦ ದಂಡ ಸಂಗ್ರಹವಾಗಿದ್ದು, ಇನ್ನೂ ?೬೧,೫೧,೭೦೦ ದಂಡ ವಸೂಲಿಗೆ ಬಾಕಿ ಇದೆ ಎಂದು ಹೇಳಿದರು.
ಬಾಕಿ ದಂಡವನ್ನು ಸಂಗ್ರಹಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ರಿಯಾಯಿತಿ ಅಭಿಯಾನ ಆರಂಭಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ದಂಡ ಪಾವತಿಗೆ ಯಾದಗಿರಿ ಸಂಚಾರಿ ಪೊಲೀಸ್ ಠಾಣೆ, ಸುಭಾಷ್ ವೃತ್ತ, ಹಳೆಯ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಗಂಜ್ ವೃತ್ತ ಹಾಗೂ ಗಾಂಧಿ ವೃತ್ತಗಳಲ್ಲಿ ಕರ್ತವ್ಯದಲ್ಲಿರುವ ಸಂಚಾರಿ ಪೊಲೀಸ್ ಸಿಬ್ಬಂದಿ ಬಳಿ ಅವಕಾಶ ಕಲ್ಪಿಸಲಾಗಿದೆ. ಆನ್‌ಲೈನ್ ಮೂಲಕವೂ ಪಾವತಿ ಮಾಡಲು ಅವಕಾಶವಿದೆ ಎಂದು ತಿಳಿಸಿದರು.
ಆರ್‌ಟಿಒ ದಂಡಕ್ಕೂ ಶೇ.೫೦ ರಿಯಾಯಿತಿ
ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಪ್ರಕರಣಗಳಲ್ಲಿ ಯಾದಗಿರಿ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ ೧೮,೪೯,೫೦೦ ದಂಡ ವಸೂಲಿ ಬಾಕಿ ಉಳಿದಿದೆ. ಈ ದಂಡ ಮೊತ್ತವನ್ನು ಪಾವತಿಸುವವರಿಗೂ ಜೂನ್ ೨೧ರಿಂದ ಜುಲೈ ೧೦ರವರೆಗೆ ಶೇ.೫೦ ರಿಯಾಯಿತಿ ನೀಡಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಡಿಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಮರಿಯಪ್ಪ,ಆರ್ ಟಿ ಓ ಮಿಲಿಂದಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.





























