
ಬೀದರ್:ಜೂ.೧೭: ನಗರದ ಶಾಹಗಂಜದ ಹೆಳವಗಲ್ಲಿಯಲ್ಲಿರುವ ಶ್ರೀ ವಿವೇಕ ಗಣೇಶ ದೇವಸ್ಥಾನದ ನೂತನ ಕಟ್ಟಡದಲ್ಲಿ ಮೂರ್ತಿಗಳ ಶಂಕುಸ್ಥಾಪನೆ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮಹೋತ್ಸವವು ಬುಧವಾರ ಭಕ್ತಿಭಾವ ಮತ್ತು ಸಂಭ್ರಮದಿAದ ನೆರವೇರಿತು. ಬೆಳಗ್ಗೆಯಿಂದಲೇ ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಮಹೋತ್ಸವದ ಅಂಗವಾಗಿ ಬೆಳಗ್ಗೆ ೮ ಗಂಟೆಗೆ ವೇದಪಂಡಿತರ ನೇತೃತ್ವದಲ್ಲಿ ಸಕಲ ದೇವತಾ ಪೂಜೆ, ಹೋಮ, ರುದ್ರಾಭಿಷೇಕ, ನವಗ್ರಹ ಪೂಜೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ನಂತರ ಮಹಾಪೂರ್ಣಾಹುತಿ ನೆರವೇರಿಸಿ, ಶ್ರೀ ಗಣೇಶ, ಈಶ್ವರ ಹಾಗೂ ನಾಗ ದೇವರ ಮೂರ್ತಿಗಳಿಗೆ ವೈದಿಕ ಮಂತ್ರೋಚ್ಚಾರಗಳ ಮಧ್ಯೆ ಪ್ರಾಣ ಪ್ರತಿಷ್ಠಾಪನೆ ನಡೆಸಲಾಯಿತು.
ಬೆಳಗ್ಗೆ ೧೦.೪೦ ಗಂಟೆಗೆ ದೇವಸ್ಥಾನದ ನೂತನ ಕಟ್ಟಡದ ಶಿಖರದ ಮೇಲೆ ಕಳಸಾರೋಹಣ ಕಾರ್ಯಕ್ರಮ ಅತ್ಯಂತ ವೈಭವದಿಂದ ನೆರವೇರಿತು. ಕಳಸಾರೋಹಣದ ವೇಳೆ ನೂರಾರು ಮಹಿಳೆಯರು ತಲೆಯ ಮೇಲೆ ಕಳಸಗಳನ್ನು ಹೊತ್ತು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಭಕ್ತರು ಹೂವಿನ ಮಳೆಗರೆದು ದೇವರ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪುರೋಹಿತರು ಹಾಗೂ ಗಣ್ಯರು ಉಪಸ್ಥಿತರಿದ್ದು ಭಕ್ತರಿಗೆ ಆಶೀರ್ವಚನ ನೀಡಿದರು. ಮಹೋತ್ಸವದ ಬಳಿಕ ಮಹಾಮಂಗಳಾರತಿ ನೆರವೇರಿಸಿ, ಆಗಮಿಸಿದ್ದ ಭಕ್ತರಿಗೆ ತೀರ್ಥಪ್ರಸಾದ ಹಾಗೂ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತರ ದಂಡು ದೇವಸ್ಥಾನಕ್ಕೆ ಹರಿದುಬಂದಿದ್ದು, ಮಹಿಳೆಯರು, ಯುವಕರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಈ ಸಂದರ್ಭದಲ್ಲಿ ಪ್ರಮುಖ ಮುಖಂಡರಾದ ಈಶ್ವರಸಿಂಗ್ ಠಾಕೂರ್ ಅವರು ತಮ್ಮ ಧರ್ಮಪತ್ನಿಯೊಂದಿಗೆ ಆಗಮಿಸಿ ಹೋಮ, ರುದ್ರಾಭಿಷೇಕ, ನವಗ್ರಹ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿದರು. ಬಳಿಕ ಮಾತನಾಡಿದ ಅವರು, “ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಲ್ಲ, ಸಮಾಜವನ್ನು ಒಗ್ಗೂಡಿಸುವ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಶಕ್ತಿಕೇಂದ್ರಗಳಾಗಿವೆ. ಶ್ರೀ ವಿವೇಕ ಗಣೇಶ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣದಿಂದ ಶಾಹಗಂಜ ಹಾಗೂ ಸುತ್ತಮುತ್ತಲಿನ ಪ್ರದೇಶದ ಭಕ್ತರಿಗೆ ಧಾರ್ಮಿಕ ಚಟುವಟಿಕೆಗಳ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು ಉತ್ತಮ ವೇದಿಕೆ ದೊರೆತಿದೆ. ಇಂತಹ ದೇವಾಲಯಗಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಧಾರ್ಮಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ” ಎಂದು ಹೇಳಿದರು.
ಅಲ್ಲದೆ, ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಿದ ದಾನಿಗಳು, ಭಕ್ತರು ಹಾಗೂ ದೇವಸ್ಥಾನ ಟ್ರಸ್ಟ್ ಸದಸ್ಯರ ಸೇವೆಯನ್ನು ಶ್ಲಾಘಿಸಿದ ಅವರು, “ದೇವಸ್ಥಾನದ ಪ್ರಗತಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುತ್ತಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ಇಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುವಜನರಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಕಾರ್ಯ ನಡೆಯಬೇಕು” ಎಂದು ಆಶಯ ವ್ಯಕ್ತಪಡಿಸಿದರು.
ಈ ಮಹೋತ್ಸವದಲ್ಲಿ ದೇವಸ್ಥಾನ ಟ್ರಸ್ಟ್ ಸದಸ್ಯರು, ಶಾಹಗಂಜ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಭಕ್ತರು, ವಿವಿಧ ಸಂಘ-ಸAಸ್ಥೆಗಳ ಪ್ರತಿನಿಧಿಗಳು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಮತ್ತು ಧಾರ್ಮಿಕ ಉತ್ಸಾಹದ ವಾತಾವರಣದಲ್ಲಿ ಯಶಸ್ವಿಯಾಗಿ ಸಂಪನ್ನಗೊAಡಿತು.





























