
ವಾಷಿಂಗ್ಟನ್, ಸೆ. ೮: ಅಮೆರಿಕದ ೯/೧೧ ಉಗ್ರ ದಾಳಿಗೆ ಸಂಬಂಧಿಸಿದ ತನಿಖೆಯಲ್ಲಿ ಶಂಕಿತನಾಗಿದ್ದ ಒಮರ್ ಅಲ್-ಬಯೂಮಿಗೆ ಅಲ್-ಖೈದಾ ಹಾಗೂ ಸೌದಿ ಅರೇಬಿಯಾ ಸರ್ಕಾರಿ ಅಧಿಕಾರಿಗಳೊಂದಿಗೆ ಇದ್ದ ಸಂಪರ್ಕದ ಕುರಿತು ಹೊಸ ಸಾಕ್ಷ್ಯಗಳು ಬೆಳಕಿಗೆ ಬಂದಿವೆ. ೨೦೦೧ರ ದಾಳಿಯ ಕೆಲವೇ ದಿನಗಳಲ್ಲಿ ಎಫ್‌ಬಿಐ ವಶಪಡಿಸಿಕೊಂಡಿದ್ದರೂ, ಇದುವರೆಗೆ ಬಹಿರಂಗವಾಗದಿದ್ದ ವಿಡಿಯೊ ದೃಶ್ಯಗಳು ಇದೀಗ ಹೊರಬಿದ್ದಿವೆ.
೯/೧೧ ದಾಳಿಯಲ್ಲಿ ಭಾಗಿಯಾಗಿದ್ದ ೧೯ ಮಂದಿ ಅಪಹರಣಕಾರರಲ್ಲಿ ಇಬ್ಬರಿಗೆ ಬಯೂಮಿ ನೆರವು ನೀಡಿದ್ದಾನೆ ಎಂದು ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳು ಆರೋಪಿಸಿವೆ. ಇದೇ ಆಧಾರದ ಮೇಲೆ ಸೌದಿ ಅರೇಬಿಯಾ ವಿರುದ್ಧ ಕುಟುಂಬಗಳು ಹೂಡಿರುವ ಸುಮಾರು ೧ ಟ್ರಿಲಿಯನ್ ಡಾಲರ್ ಮೊತ್ತದ ಮೊಕದ್ದಮೆಗೆ ಸಂಬಂಧಿಸಿದ ದಾಖಲೆಗಳ ಭಾಗವಾಗಿ ಈ ಸಾಕ್ಷ್ಯಗಳು ಬಹಿರಂಗವಾಗಿವೆ. ಆದರೆ ಸೌದಿ ಅರೇಬಿಯಾ ತನ್ನ ಅಧಿಕಾರಿಗಳು ಅಥವಾ ಸರ್ಕಾರಕ್ಕೆ ೯/೧೧ ದಾಳಿಯಲ್ಲಿ ಯಾವುದೇ ರೀತಿಯ ಸಂಬಂಧವಿದೆ ಎಂಬ ಆರೋಪವನ್ನು ನಿರಂತರವಾಗಿ ತಳ್ಳಿಹಾಕಿದೆ.
೧೯೯೭ ಅಥವಾ ೧೯೯೮ರ ಆರಂಭದಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾದ ವಿಡಿಯೊದಲ್ಲಿ ಬಯೂಮಿ, ಅನ್ವರ್ ಅಲ್-ಅವ್ಲಾಕಿ ಸೇರಿದಂತೆ ಕೆಲವರು ಸ್ಯಾನ್ ಡಿಯಾಗೊ ಸಮೀಪ ಮಿಲಿಟರಿ ಮಾದರಿಯ ಪೇಂಟ್‌ಬಾಲ್ ಆಟದಲ್ಲಿ ಭಾಗವಹಿಸಿರುವುದು ಕಾಣಿಸುತ್ತದೆ.
ಕೆಲವರು ಸೇನಾ ಸಮವಸ್ತ್ರದ ಮಾದರಿಯ ಉಡುಪು ಧರಿಸಿದ್ದು, ಆಟದ ವೇಳೆ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿರುವುದೂ ದೃಶ್ಯಗಳಲ್ಲಿ ಕಂಡುಬರುತ್ತದೆ. ಈ ಪೇಂಟ್‌ಬಾಲ್ ಆಟಗಳು ಜಿಹಾದ್‌ಗೆ ತರಬೇತಿ ಪಡೆಯುವ ಉದ್ದೇಶ ಹೊಂದಿದ್ದವು ಎಂದು ಕೆಲವು ಎಫ್‌ಬಿಐ ಅಧಿಕಾರಿಗಳಿಗೆ ತನಿಖೆಯ ಸಂದರ್ಭದಲ್ಲಿ ತಿಳಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಅದೇ ವೇಳೆ, ಭವಿಷ್ಯದಲ್ಲಿ ಅಲ್-ಖೈದಾದ ಪ್ರಮುಖ ನಾಯಕನಾಗಿ ಗುರುತಿಸಿಕೊಂಡ ಅವ್ಲಾಕಿಯೊಂದಿಗೆ ಬಯೂಮಿ ಆತ್ಮೀಯವಾಗಿ ಅಪ್ಪಿಕೊಳ್ಳುತ್ತಿರುವ ಮತ್ತೊಂದು ದೃಶ್ಯವೂ ಪತ್ತೆಯಾಗಿದೆ. ಸೌದಿ ಧಾರ್ಮಿಕ ವ್ಯವಹಾರಗಳ ಸಚಿವಾಲಯಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಧಾರ್ಮಿಕ ಮುಖಂಡರೊಂದಿಗೆ ಬಯೂಮಿ ನಡೆಸಿದ ಸಭೆಗಳ ದೃಶ್ಯಗಳೂ ವಿಡಿಯೊದಲ್ಲಿವೆ.
ಬಯೂಮಿ ೧೯೯೪ರಲ್ಲಿ ಸೌದಿ ಅರೇಬಿಯಾದಿಂದ ಸ್ಯಾನ್ ಡಿಯಾಗೊಗೆ ಆಗಮಿಸಿದ್ದ. ಇಂಗ್ಲಿಷ್ ಕಲಿಯಲು ಅಮೆರಿಕಕ್ಕೆ ಬಂದಿರುವುದಾಗಿ ಆತ ಹೇಳಿಕೊಂಡಿದ್ದ. ಆದರೆ ನಂತರದ ನ್ಯಾಯಾಲಯದ ದಾಖಲೆಗಳ ಪ್ರಕಾರ, ಆತ ತನ್ನ ಅಧ್ಯಯನವನ್ನು ಬಹುತೇಕ ಕೈಬಿಟ್ಟು ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಯಲ್ಲಿ ತೊಡಗಿಸಿಕೊಂಡಿದ್ದ.
೯/೧೧ ದಾಳಿಯ ನಂತರ ಬಯೂಮಿ ಎಫ್‌ಬಿಐನ ಪ್ರಮುಖ ಶಂಕಿತರ ಪಟ್ಟಿಯಲ್ಲಿ ಕಾಣಿಸಿಕೊಂಡ. ದಾಳಿಯಲ್ಲಿ ಭಾಗಿಯಾಗಿದ್ದ ನವಾಫ್ ಅಲ್-ಹಜ್ಮಿ ಮತ್ತು ಖಾಲಿದ್ ಅಲ್-ಮಿಹ್ದರ್ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ನ ಬಾಡಿಗೆ ಒಪ್ಪಂದದಲ್ಲಿ ಬಯೂಮಿಯ ಹೆಸರು ಪತ್ತೆಯಾಗಿತ್ತು.
೯/೧೧ ದಾಳಿಯ ಬಳಿಕ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ಗೆ ತೆರಳಿದ್ದ ಬಯೂಮಿಯನ್ನು ಸೆಪ್ಟೆಂಬರ್ ೨೧, ೨೦೦೧ರಂದು ಮೆಟ್ರೊಪಾಲಿಟನ್ ಪೊಲೀಸ್ ಬಂಧಿಸಿತು.ಅವನ ನಿವಾಸಗಳ ಶೋಧದ ವೇಳೆ ಸಾವಿರಾರು ದಾಖಲೆಗಳು, ಛಾಯಾಚಿತ್ರಗಳು ಹಾಗೂ ಕನಿಷ್ಠ ೮೦ ವಿಡಿಯೊ ಟೇಪ್‌ಗಳು ಪತ್ತೆಯಾಗಿದ್ದವು.
ಅವುಗಳಲ್ಲಿ ವಿಮಾನದ ಚಿತ್ರವೊಂದರ ಜತೆಗೆ ಅದರ ಎತ್ತರ, ಗುರಿಯಿಂದ ದೂರ ಸೇರಿದಂತೆ ಗಣಿತೀಯ ಲೆಕ್ಕಾಚಾರಗಳನ್ನು ಒಳಗೊಂಡಿದ್ದ ನೋಟುಪುಸ್ತಕದ ಪುಟವೂ ಇತ್ತು.೯/೧೧ ಕುಟುಂಬಗಳ ಕಾನೂನು ತಂಡದ ಸದಸ್ಯೆ ಜೋಡಿ ವೆಸ್ಟ್‌ಬ್ರೂಕ್ ಫ್ಲವರ್ಸ್ ಪ್ರಕಾರ, ಆ ಲೆಕ್ಕಾಚಾರವು ವಿಮಾನ ಅಪಘಾತದ ಕುರಿತು ಮಾಡಲಾಗಿದ್ದ ಗಣನೆಯಾಗಿತ್ತು. ತನಿಖಾ ತಂಡಕ್ಕೆ ಇದು ಅತ್ಯಂತ ಮಹತ್ವದ ಸಾಕ್ಷ್ಯವೆಂದು ಅವರು ಹೇಳಿದ್ದಾರೆ.
































