Home ಮುಖಪುಟ ಸುದ್ದಿ ಬಿಜೆಪಿ ಪಾದಯಾತ್ರೆ ಸಮಾರೋಪ ಅನುಮತಿ ನಿರಾಕರಣೆ

ಬಿಜೆಪಿ ಪಾದಯಾತ್ರೆ ಸಮಾರೋಪ ಅನುಮತಿ ನಿರಾಕರಣೆ

ಬಳ್ಳಾರಿ.ಸೆ.೮- ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಮುಂದಿಟ್ಟುಕೊಂಡು ಬಿಜೆಪಿ ಬಳ್ಳಾರಿ ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭಕ್ಕೆ ಕಳೆದ ೨೦೧೫ ರಲ್ಲಿ ಹೊರಡಿಸಿದ ಆದೇಶವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಬಳ್ಳಾರಿ ನಗರದಲ್ಲಿ ಸೆಪ್ಟೆಂಬರ್ ೧೦ರಂದು ಆಯೋಜಿಸಲು ಉದ್ದೇಶಿಸಲಾಗಿದ್ದ ಬಿಜೆಪಿಯ ಬೃಹತ್ ಬಹಿರಂಗ ಸಮಾವೇಶಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು (ಎಕ್ಸ್ ಮುನ್ಸಿಪಲ್ ಶಾಲೆ) ಮೈದಾನವನ್ನು ಬಳಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅನುಮತಿ ನಿರಾಕರಿಸಿದೆ.

ಬಿಜೆಪಿ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ ಸೆ.೭ರಂದು ಮನವಿ ಸಲ್ಲಿಸಿ, ಸೆ.೧೦ರಂದು ಮಧ್ಯಾಹ್ನ ೩ ರಿಂದ ಸಂಜೆ ೮ ಗಂಟೆಯವರೆಗೆ ಸಮಾವೇಶ ನಡೆಸಲು ಮೈದಾನ ನೀಡುವಂತೆ ಕೋರಿದ್ದರು.

ಈ ಸಮಾವೇಶದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಹಾಗೂ ೫೦ ಸಾವಿರಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿತ್ತು.

ಸರ್ಕಾರದ ಒತ್ತಡಕ್ಕೆ ಮಣಿದ ಡಿಸಿ :

ಬಳ್ಳಾರಿಯಲ್ಲಿ ಬಿಜೆಪಿ ಸಮಾವೇಶ ನಡೆಸಲು ಮೈದಾನ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಬಿವೈವಿ ಪ್ರತಿಕ್ರಿಯಿಸಿದ್ದಾರೆ.

ಸಮಾವೇಶ ನಡೆಸಲು ನಾವೂ ಮೈದಾನ ಕೇಳಿದ್ದೆವು.ಆದರೆ ಜಿಲ್ಲಾಧಿಕಾರಿಗಳು ನಮ್ಮ ಮನವಿಯನ್ನು ತಿರಸ್ಕರಿಸಿದ್ದಾರೆ. ಈ ಕುರಿತು ನಾನು ಜಿಲ್ಲಾಧಿಕಾರಿ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಸರ್ಕಾರದ ಒತ್ತಡಕ್ಕೆ ಮಣಿಯುತ್ತಿದ್ದಾರೆ ಅನಿಸುತ್ತಿದೆ.ನಮಗೆ ಮೈದಾನ ನೀಡುವುದಿಲ್ಲ ಎಂದು ಹೇಗೆ ಹೇಳುತ್ತಾರೆ ಎಂಬುದನ್ನು ನೋಡುತ್ತೇವೆ.ನಮ್ಮ ಕಾರ್ಯಕ್ರಮ ಸಂಜೆ ನಡೆಯಲಿದೆ. ಇದರಿಂದ ಯಾವುದೇ ರೀತಿಯಲ್ಲೂ ಯಾರಿಗೂ ಸಮಸ್ಯೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಡಿಸಿ ಕಚೇರಿ ಎದುರು ಬಿಜೆಪಿ ಪ್ರತಿಭಟನೆ :

ಬಳ್ಳಾರಿಯಲ್ಲಿ ಬಿಜೆಪಿ ಆಯೋಜಿಸಲು ಉದ್ದೇಶಿಸಿರುವ ಸಮಾವೇಶಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಈ ಹಿಂದೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಭಾರತ್ ಜೋಡೋ ಸಮಾವೇಶ ಹಾಗೂ ಸಾಧನಾ ಸಮಾವೇಶಗಳು ನಡೆದಿದ್ದವು. ಆ ಸಂದರ್ಭದಲ್ಲಿ ಯಾವುದೇ ಅನುಮತಿ ಪಡೆಯಲಾಗಿರಲಿಲ್ಲ. ಹಾಗಿದ್ದರೆ ಇದೀಗ ಬಿಜೆಪಿ ಸಮಾವೇಶಕ್ಕೆ ಮಾತ್ರ ಅನುಮತಿ ನಿರಾಕರಿಸಿರುವುದೇಕೆ ಎಂದು ಪ್ರಶ್ನಿಸಿರುವ ಬಿಜೆಪಿ ನಾಯಕರು, ಸಮಾವೇಶ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಬಿಜೆಪಿ ನಾಯಕರ ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಸಜ್ಜಾಗಿದ್ದಾರೆ.

ನಿರಾಕರಿಸಿದ್ದು ಯಾಕೆ? :
ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ೨೦೧೫ ರ ಜೂನ್ ೧೧ರ ಅಧಿಕೃತ ಸುತ್ತೋಲೆಯನ್ನು ಉಲ್ಲೇಖಿಸಿ ಬಳ್ಳಾರಿ ವಿಜಯನಗರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಮೈದಾನ ಹಾಗೂ ಕಟ್ಟಡಗಳನ್ನು ಖಾಸಗಿ ಸಂಘ-ಸಂಸ್ಥೆಗಳ ಸಾರ್ವಜನಿಕ ಅಥವಾ ಖಾಸಗಿ ಸಮಾರಂಭಗಳಿಗೆ, ಪ್ರದರ್ಶನಗಳಿಗೆ, ವ್ಯಾಪಾರ ಮಳಿಗೆಗಳಿಗೆ ಹಾಗೂ ಮನೋರಂಜನಾ ಕಾರ್ಯಕ್ರಮಗಳಿಗೆ ನೀಡಬಾರದು ಎಂದು ಕಟ್ಟುನಿಟ್ಟಿನ ಆದೇಶವಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರನ್ನೇ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆ ಇರುವುದರಿಂದ, ಬಿಜೆಪಿ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಹೈಕೋರ್ಟ್‌ನಲ್ಲಿದೆ ಅರ್ಜಿ:

ಸರ್ಕಾರಿ ಆಸ್ತಿಗಳಾದ ಶಾಲೆ, ಪಿಯು ಕಾಲೇಜುಗಳ ಮೈದಾನ, ಉದ್ಯಾನವನ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರದ ಪೂರ್ವಾನುಮತಿ ಕಡ್ಡಾಯವೆಂದು ಕಳೆದ ವರ್ಷದ ಅಕ್ಟೋಬರ್ ೧೮ ರಂದು ಸಚಿವ ಸಂಪುಟವು ನಿರ್ಧರಿಸಿ ಮಾರ್ಗಸೂಚಿ ಹೊರಡಿಸಿತ್ತು. ಸರ್ಕಾರಿ ಆಸ್ತಿಗಳಾದ ಶಾಲೆಗಳು, ಪಿಯು ಕಾಲೇಜುಗಳ ಮೈದಾನ, ಉದ್ಯಾನವನ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳು ಅಥವಾ ಗುಂಪುಗಳು ಯಾವುದೇ ಕಾರ್ಯಕ್ರಮ ಅಥವಾ ಸಮಾವೇಶ ನಡೆಸಲು ಪೂರ್ವಾನುಮತಿ ಪಡೆಯುವುದು ಈ ಆದೇಶದ ಅನ್ವಯ ಕಡ್ಡಾಯವಾಗಿತ್ತು.

ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈ ಹಿಂದೆ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿ ವಿಚಾರಣೆ ನಡೆಸುತ್ತಿದೆ. ಹೀಗಿದ್ದರೂ ೨೦೧೫ ರ ಆದೇಶದ ಅನ್ವಯ ಬಿಜೆಪಿ ಸಮಾವೇಶಕ್ಕೆ ಮೈದಾನ ನಿರಾಕರಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕುಡುತಿನಿಯವರೆಗೆ ಪಾದಯಾತ್ರೆ :

ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಬಳ್ಳಾರಿ ಚಲೋ ಪಾದಯಾತ್ರೆ ಎಂಟನೇ ದಿನಕ್ಕೆ ಕಾಲಿಟ್ಟಿದ್ದು,ಸಂಡೂರಿನ ಹಳೇ ದರೋಜಿಯಿಂದ ತಿಮ್ಮಾಪುರ ಮಾರ್ಗವಾಗಿ ಕುಡುತಿನಿಯವರೆಗೆ ನಡೆಯಲಿದೆ.

ರಾಯಚೂರಿನ ಲಿಂಗಸುಗೂರಿನಿಂದ ಸೆಪ್ಟೆಂಬರ್ ೧ರಂದು ಆರಂಭವಾದ ಪಾದಯಾತ್ರೆ ಇದೀಗ ಅಂತಿಮ ಹಂತ ತಲುಪಿದ್ದು, ಪ್ರತಿದಿನದ ಬೆಳವಣಿಗೆಗಳು ಗಮನ ಸೆಳೆಯುತ್ತಿವೆ. ರಸ್ತೆಯುದ್ದಕ್ಕೂ ಕಾರ್ಯಕರ್ತರ ಉತ್ಸಾಹ, ನಾಯಕರು ಸಾಗುವ ಮಾರ್ಗದಲ್ಲಿ ಹೂವಿನ ಮಳೆ ಹಾಗೂ ಜೆನ್‌ಝೀ ಯುವಕರೊಂದಿಗೆ ನಡೆಯುತ್ತಿರುವ ಸಂವಾದ ಪಾದಯಾತ್ರೆಯ ಪ್ರಮುಖ ಆಕರ್ಷಣೆಯಾಗಿವೆ. ಏಳು ದಿನವಾದ ನಿನ್ನೆ ಹಲವು ಬಿಜೆಪಿ ನಾಯಕರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಸುಮಾರು ೨೦ ಕಿಲೋಮೀಟರ್‌ಗಳಷ್ಟು ದೂರ ಪಾದಯಾತ್ರೆ ಸಾಗಿತು.

ಇಂದು ಬಿಜೆಪಿ ಬಳ್ಳಾರಿ ಚಲೋ ೮ನೇ ದಿನದ ೧೪ ಕಿ.ಮೀ.ಗಳ ಪಾದಯಾತ್ರೆ ಹಳೇ ದರೋಜಿಯಿಂದ ಬೆಳಿಗ್ಗೆ ೮ ಗಂಟೆಗೆ ಆರಂಭಗೊಂಡು ಕುಡುತಿನಿಯತ್ತ ಸಾಗಿದ್ದು, ಮಾರ್ಗಮಧ್ಯೆ ತಿಮ್ಮಾಪುರದಲ್ಲಿ ಭರ್ಜರಿ ಸ್ವಾಗತ ದೊರತಿದೆ.
ಕೈ ವಿರುದ್ಧ ವಾಗ್ದಾಳಿ
ಹಳೆ ದರೋಜಿ ಗ್ರಾಮದಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದಾದ್ಯಂತ ಅಭಿವೃದ್ಧಿ ಕುಂಠಿತಗೊಂಡಿದೆ. ರಾಜ್ಯದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಜನೌಷಧ ಕೇಂದ್ರಗಳನ್ನು ಸರ್ಕಾರ ಮುಚ್ಚುತ್ತಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಮುಖ್ಯಮಂತ್ರಿ ಬೆಂಗಳೂರಿನಲ್ಲಿ ಕುಳಿತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ನಾಯಕರ ಆಕ್ರೋಶ :

ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಇತರ ಬಿಜೆಪಿ ನಾಯಕರು ಕೂಡ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ಕೌರವರ ಸ್ಥಾನದಲ್ಲಿದೆ ಎಂದು ಸಿ.ಟಿ. ರವಿ ಟೀಕಿಸಿದರು. ಬರ ನಿರ್ವಹಣೆ ವಿಚಾರದಲ್ಲಿಯೂ ಸರ್ಕಾರದ ವಿರುದ್ಧ ಮಾಜಿ ಸಚಿವ ಬಿ. ಶ್ರೀರಾಮುಲು ಹಾಗೂ ಸಂಸದ ಬಿ.ವೈ. ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ರೈತರ ಸಮಸ್ಯೆಗಳಿಗೆ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.