Home ಜಿಲ್ಲೆ 1,010 ಕೋಟಿ ಯುವ ಸಂಘ ಯೋಜನೆಗೆ ರಾಜಕೀಯ ಕಳಂಕದ ಭೀತಿ!

1,010 ಕೋಟಿ ಯುವ ಸಂಘ ಯೋಜನೆಗೆ ರಾಜಕೀಯ ಕಳಂಕದ ಭೀತಿ!

ಸಂಜೆವಾಣಿ ವಾರ್ತೆ

ಬಳ್ಳಾರಿ, ಆ.17: ರಾಜ್ಯದ ಯುವಜನರನ್ನು ಕ್ರೀಡೆ, ಸಂಸ್ಕೃತಿ, ಸಾಮಾಜಿಕ ಸೇವೆ ಹಾಗೂ ವೈಜ್ಞಾನಿಕ ಚಟುವಟಿಕೆಗಳತ್ತ ಸೆಳೆಯುವ ಉದ್ದೇಶದಿಂದ ಸರ್ಕಾರ ರೂಪಿಸಿರುವ ‘ಭಾರತ್ ಜೋಡೊ ಯುವ ಸಂಘ’ಗಳ ಯೋಜನೆ ಇದೀಗ ಭಾರಿ ಅನುದಾನದಿಂದಲೇ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದ 6 ಸಾವಿರ ಗ್ರಾಮ ಪಂಚಾಯಿತಿಗಳು ಹಾಗೂ 4 ಸಾವಿರ ನಗರ ವಾರ್ಡ್ಗಳಲ್ಲಿ ಒಟ್ಟು 10 ಸಾವಿರ ಯುವ ಸಂಘಗಳನ್ನು ರಚಿಸಲು ಸರ್ಕಾರ ಮುಂದಾಗಿದ್ದು, ಪ್ರತಿಯೊಂದು ಸಂಘಕ್ಕೆ 10 ಲಕ್ಷದಂತೆ ಬರೋಬ್ಬರಿ 1,000 ಕೋಟಿ ಅನುದಾನ ನೀಡುವ ಯೋಜನೆ ರೂಪಿಸಲಾಗಿದೆ. ಆಡಳಿತಾತ್ಮಕ ಹಾಗೂ ಇತರೆ ವೆಚ್ಚ ಸೇರಿ ಒಟ್ಟು 1,010 ಕೋಟಿ ವೆಚ್ಚವಾಗುವ ಅಂದಾಜಿದೆ.

ಸರ್ಕಾರದ ಆಶಯ ಯುವಜನರ ಸಬಲೀಕರಣವಾದರೂ, ಇಷ್ಟೊಂದು ದೊಡ್ಡ ಪ್ರಮಾಣದ ಹಣ ಸ್ಥಳೀಯ ಮಟ್ಟದಲ್ಲಿ ಹರಿದುಬರುವುದರಿಂದ ಸಂಘಗಳ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯಬಹುದೇ ಎಂಬ ಪ್ರಶ್ನೆ ಎದುರಾಗಿದೆ.

ಯುವ ಸಂಘವೇ… ರಾಜಕೀಯ ವೇದಿಕೆಯಾಗದಿರಲಿ! :

ಸಂಘಗಳು ಯಾವುದೇ ಪಕ್ಷ ಅಥವಾ ವ್ಯಕ್ತಿಯ ಹಿಡಿತಕ್ಕೆ ಸಿಲುಕದೆ ಎಲ್ಲ ವರ್ಗದ ಯುವಕರಿಗೂ ಸಮಾನ ಅವಕಾಶ ಕಲ್ಪಿಸಬೇಕು ಎಂಬುದು ಯೋಜನೆಯ ಮೂಲ ಉದ್ದೇಶ. ಆದರೆ ಸ್ಥಳೀಯ ಮಟ್ಟದಲ್ಲಿ ಪ್ರಭಾವ ಹೊಂದಿರುವವರು ಸಂಘಗಳ ಪದಾಧಿಕಾರಿಗಳಾಗುವ ಮೂಲಕ ಸರ್ಕಾರದ ಅನುದಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂಬ ಆತಂಕವೂ ಕೇಳಿಬರುತ್ತಿದೆ.

ವಿಶೇಷವಾಗಿ ‘ಭಾರತ್ ಜೋಡೊ’ ಎಂಬ ಹೆಸರಿನ ಹಿನ್ನೆಲೆಯಲ್ಲಿ ಸಂಘಗಳು ರಾಜಕೀಯ ಬಣ್ಣ ಪಡೆದುಕೊಳ್ಳದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಮುಂದಿರುವ ಪ್ರಮುಖ ಸವಾಲಾಗಿದೆ.

ನೈಜ ಯುವಕರು, ಕ್ರೀಡಾಪಟುಗಳು, ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವವರು ಸಂಘಗಳಲ್ಲಿ ಸ್ಥಾನ ಪಡೆಯಬೇಕೇ ಹೊರತು, ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತರು ಸಂಘದ ಚಟುವಟಿಕೆಗಳನ್ನು ನಿಯಂತ್ರಿಸುವಂತಾಗಬಾರದು ಎಂಬ ಒತ್ತಾಯಗಳು ವ್ಯಕ್ತವಾಗುತ್ತಿವೆ.

100 ಯುವಕರಿಗೆ ಒಂದು ಸಂಘ :

ಸರ್ಕಾರದ ಮಾರ್ಗಸೂಚಿಯಂತೆ 16ರಿಂದ 35 ವರ್ಷದೊಳಗಿನ ಕನಿಷ್ಠ 100 ಯುವಕರನ್ನು ಒಳಗೊಂಡ ಸಂಘ ರಚಿಸಬೇಕಿದೆ. ಸಂಘವನ್ನು ‘ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ-1960’ರ ಅಡಿಯಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

ಕ್ರೀಡೆ, ಯೋಗ, ಸಾಂಸ್ಕೃತಿಕ ಚಟುವಟಿಕೆಗಳು, ಸೈಬರ್ ಭದ್ರತೆ ಕುರಿತು ಜಾಗೃತಿ, ಮಾದಕ ವಸ್ತುಗಳ ವಿರುದ್ಧ ಅರಿವು, ಸಾಮಾಜಿಕ ಸಾಮರಸ್ಯ ಹಾಗೂ ಸಮುದಾಯ ಅಭಿವೃದ್ಧಿಯಂತಹ ಚಟುವಟಿಕೆಗಳನ್ನು ಸಂಘಗಳು ಕೈಗೊಳ್ಳಬೇಕಿದೆ.

10 ಲಕ್ಷದ ಬಳಕೆಯೇ ದೊಡ್ಡ ಸವಾಲು :

ಪ್ರತಿ ಸಂಘಕ್ಕೆ 10 ಲಕ್ಷದಷ್ಟು ಮೊತ್ತ ದೊರೆಯುವುದರಿಂದ ಅದರ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಗಾ ಅಗತ್ಯವಾಗಿದೆ. ಕ್ರೀಡಾ ಸಾಮಗ್ರಿ ಖರೀದಿ, ತರಬೇತಿ, ಸಾಂಸ್ಕೃತಿಕ ಕಾರ್ಯಕ್ರಮ, ಯುವಕರಿಗೆ ವಿವಿಧ ಚಟುವಟಿಕೆಗಳ ಆಯೋಜನೆ ಸೇರಿದಂತೆ ಸರ್ಕಾರ ನಿಗದಿಪಡಿಸುವ ಉದ್ದೇಶಗಳಿಗೆ ಮಾತ್ರ ಹಣ ಬಳಕೆಯಾಗಬೇಕು.

ಆದರೆ ಸ್ಥಳೀಯವಾಗಿ ಸಂಘದ ಹೆಸರಿನಲ್ಲಿ ಹಣ ಬಿಡುಗಡೆಯಾಗಿ, ಕಾಮಗಾರಿ ಅಥವಾ ಚಟುವಟಿಕೆಗಳ ಹೆಸರಿನಲ್ಲಿ ದುರ್ಬಳಕೆಯಾಗದಂತೆ ಜಿಲ್ಲಾಡಳಿತ ಯಾವ ರೀತಿಯ ನಿಯಂತ್ರಣ ವ್ಯವಸ್ಥೆ ರೂಪಿಸಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

ಬೈಲಾ ಮೂಲಕ ಕಡಿವಾಣಕ್ಕೆ ಜಿಲ್ಲಾಡಳಿತ ಚಿಂತನೆ :

ಸರ್ಕಾರ ಸಂಘ ಸ್ಥಾಪನೆಗೆ ಈಗಾಗಲೇ ಆದೇಶ ಹಾಗೂ ಮಾರ್ಗಸೂಚಿ ಹೊರಡಿಸಿರುವ ಹಿನ್ನೆಲೆಯಲ್ಲಿ, ಸಂಘಗಳು ಸುಗಮವಾಗಿ ಕಾರ್ಯನಿರ್ವಹಿಸಲು ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ಸೂಕ್ತ ಬೈಲಾ ರೂಪಿಸುವ ಅಗತ್ಯವಿದೆ ಎಂದು ಜಿಲ್ಲಾಡಳಿತ ಅಭಿಪ್ರಾಯಪಟ್ಟಿದೆ.

ಸಂಘದ ಸದಸ್ಯರ ಆಯ್ಕೆ, ಪದಾಧಿಕಾರಿಗಳ ಜವಾಬ್ದಾರಿ, ಸಭೆಗಳ ನಿರ್ವಹಣೆ, ಬ್ಯಾಂಕ್ ಖಾತೆ, ಹಣದ ವಹಿವಾಟು, ಅನುದಾನದ ಬಳಕೆ, ಲೆಕ್ಕಪತ್ರ ನಿರ್ವಹಣೆ ಹಾಗೂ ಚಟುವಟಿಕೆಗಳ ಮೇಲ್ವಿಚಾರಣೆ ಸೇರಿದಂತೆ ಹಲವು ವಿಚಾರಗಳನ್ನು ಬೈಲಾದಲ್ಲಿ ಸ್ಪಷ್ಟಪಡಿಸುವ ಸಾಧ್ಯತೆಯಿದೆ.

ಅದೇ ರೀತಿ ಸಂಘದ ಹೆಸರಿನಲ್ಲಿ ಯಾವುದೇ ರಾಜಕೀಯ ಪಕ್ಷದ ಪರ ಅಥವಾ ವಿರೋಧವಾಗಿ ಕಾರ್ಯಕ್ರಮ ನಡೆಸದಂತೆ ನಿಯಮ ರೂಪಿಸುವುದು, ಅನುದಾನವನ್ನು ವೈಯಕ್ತಿಕ ಅಥವಾ ರಾಜಕೀಯ ಉದ್ದೇಶಕ್ಕೆ ಬಳಸಿದರೆ ಜವಾಬ್ದಾರಿ ನಿಗದಿಪಡಿಸುವುದು ಕೂಡ ಮುಖ್ಯವಾಗಲಿದೆ.

ತರಬೇತುದಾರರ ಆಯ್ಕೆಯಲ್ಲೂ ಪಾರದರ್ಶಕತೆ ಅಗತ್ಯ

ಯುವ ಸಂಘಗಳ ಚಟುವಟಿಕೆಗಳಿಗೆ ತರಬೇತುದಾರರು ಹಾಗೂ ಸಿಬ್ಬಂದಿಯ ಪಾತ್ರವೂ ಮಹತ್ವದ್ದಾಗಿದೆ. ತರಬೇತುದಾರರಿಗೆ 24 ಸಾವಿರ ಗೌರವಧನ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಈ ಆಯ್ಕೆಯಲ್ಲೂ ರಾಜಕೀಯ ಪ್ರಭಾವ ಅಥವಾ ಶಿಫಾರಸುಗಳಿಗೆ ಅವಕಾಶ ನೀಡದೆ ಅರ್ಹತೆಯ ಆಧಾರದ ಮೇಲೆ ನೇಮಕ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹಣಕ್ಕಿಂತ ಉದ್ದೇಶ ಮುಖ್ಯ :

ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವುದು, ಕ್ರೀಡಾ ಪ್ರತಿಭೆ ಗುರುತಿಸುವುದು, ಸಾಮಾಜಿಕ ಜವಾಬ್ದಾರಿ ಬೆಳೆಸುವುದು ಹಾಗೂ ಗ್ರಾಮ-ನಗರ ಮಟ್ಟದಲ್ಲಿ ಯುವಜನರನ್ನು ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸುವುದು ಯೋಜನೆಯ ಉದ್ದೇಶವಾಗಿದೆ.

ಈ ಉದ್ದೇಶ ಈಡೇರಬೇಕಾದರೆ ಸಂಘಗಳ ರಚನೆಯಿಂದ ಹಿಡಿದು ಅನುದಾನದ ಬಳಕೆಯವರೆಗೆ ಪ್ರತಿಯೊಂದು ಹಂತವೂ ಪಾರದರ್ಶಕವಾಗಿರಬೇಕು. ಇಲ್ಲವಾದರೆ ಯುವಕರ ಹೆಸರಿನಲ್ಲಿ ರೂಪುಗೊಂಡ ಸಂಘಗಳು ಕೆಲವರ ರಾಜಕೀಯ ಪ್ರಭಾವದ ಕೇಂದ್ರಗಳಾಗಿ ಬದಲಾಗುವ ಅಪಾಯವಿದೆ.

‘ಯುವ ಸಂಘಗಳು ಯುವಕರಿಗಾಗಿ ಇರಬೇಕೇ ಹೊರತು ರಾಜಕೀಯಕ್ಕಾಗಿ ಅಲ್ಲ’ ಎಂಬ ತತ್ವವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದಾಗ ಮಾತ್ರ 1,010 ಕೋಟಿ ಮೊತ್ತದ ಯೋಜನೆ ತನ್ನ ನಿಜವಾದ ಉದ್ದೇಶವನ್ನು ತಲುಪಲಿದೆ.

ಬೈಲಾ ಅನಿವಾರ್ಯ :

“ಸಂಘ ಸ್ಥಾಪನೆ ಕುರಿತು ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಮಾರ್ಗಸೂಚಿಯನ್ನೂ ನೀಡಿದೆ. ಸುಗಮ ಕಾರ್ಯ ನಿರ್ವಹಣೆಗೆ ಸೂಕ್ತ ಬೈಲಾ ರೂಪಿಸುವುದು ಅಗತ್ಯ ಮತ್ತು ಅನಿವಾರ್ಯ.”

— ನಾಗೇಂದ್ರ ಪ್ರಸಾದ್ ಕೆ., ಜಿಲ್ಲಾಧಿಕಾರಿ