Home ಮುಖಪುಟ ಸುದ್ದಿ ಕೆ.ಆರ್. ಮಾರುಕಟ್ಟೆಯಲ್ಲಿ ೧೦೦ ಟನ್ ಹೆಚ್ಚುವರಿ ತ್ಯಾಜ್ಯ ತೆರವು

ಕೆ.ಆರ್. ಮಾರುಕಟ್ಟೆಯಲ್ಲಿ ೧೦೦ ಟನ್ ಹೆಚ್ಚುವರಿ ತ್ಯಾಜ್ಯ ತೆರವು

ಬೆಂಗಳೂರು, ಆ.೨೩- ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಕೆ.ಆರ್. ಮಾರುಕಟ್ಟೆ ಹಾಗೂ ಸಂಪರ್ಕ ರಸ್ತೆಗಳಲ್ಲಿ ಸಂಗ್ರಹವಾಗಿದ್ದ ಸುಮಾರು ೧೦೦ ಟನ್ ಹೆಚ್ಚುವರಿ ತ್ಯಾಜ್ಯವನ್ನು ಎರಡು ದಿನಗಳ ವಿಶೇಷ ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಗಿದೆ.


ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಚಾಮರಾಜಪೇಟೆ ವಿಭಾಗದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೊದಲ ದಿನ ೬೦ ಟನ್ ಹಾಗೂ ಎರಡನೇ ದಿನ ೪೦ ಟನ್ ಸೇರಿದಂತೆ ಒಟ್ಟು ೧೦೦ ಟನ್ ತ್ಯಾಜ್ಯವನ್ನು ತೆರವುಗೊಳಿಸಿ ನಿಯಮಾನುಸಾರ ವಿಲೇವಾರಿ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತ ಜಗದೀಶ್.ಜಿ ತಿಳಿಸಿದ್ದಾರೆ.


ಹಬ್ಬದ ಹಿನ್ನೆಲೆಯಲ್ಲಿ ಕೆ.ಆರ್. ಮಾರುಕಟ್ಟೆ ಮಾತ್ರವಲ್ಲದೆ ಮೈಸೂರು ರಸ್ತೆ, ಅವೆನ್ಯೂ ರಸ್ತೆ ಹಾಗೂ ಬಿ.ವಿ.ಕೆ. ಅಯ್ಯಂಗಾರ್ ರಸ್ತೆಗಳಲ್ಲೂ ಹೆಚ್ಚುವರಿ ತ್ಯಾಜ್ಯ ಸಂಗ್ರಹವಾಗಿತ್ತು. ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿಶೇಷ ಸ್ವಚ್ಛತಾ ಕಾರ್ಯಾಚರಣೆ ನಡೆಸಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಗಿದೆ.


ಮೂರು ಪಾಳಿಗಳಲ್ಲಿ ನಡೆದ ಕಾರ್ಯಾಚರಣೆಗೆ ೨ ಜೆಸಿಬಿ, ೯ ಕಾಂಪ್ಯಾಕ್ಟರ್‌ಗಳು, ೭೦ ಪೌರಕಾರ್ಮಿಕರು ಹಾಗೂ ೧೦ ಮಾರ್ಷಲ್‌ಗಳು ಮತ್ತು ಮಾರ್ಷಲ್ ಸೂಪರ್‌ವೈಸರ್‌ಗಳನ್ನು ನಿಯೋಜಿಸಲಾಗಿತ್ತು. ಸ್ಥಳದಲ್ಲೇ ಮಾರ್ಷಲ್‌ಗಳು ಹಾಗೂ ಸ್ವಚ್ಛತಾ ತಂಡ ನಿರಂತರ ಮೇಲ್ವಿಚಾರಣೆ ನಡೆಸಿ ತ್ಯಾಜ್ಯ ತೆರವು ಕಾರ್ಯವನ್ನು ಸಮನ್ವಯಗೊಳಿಸಿತು.


ಹಬ್ಬಗಳ ಸಂದರ್ಭದಲ್ಲಿ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಹೆಚ್ಚುವರಿ ತ್ಯಾಜ್ಯ ಉತ್ಪತ್ತಿಯಾಗುವುದರಿಂದ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯದೆ ಪಾಲಿಕೆಯ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯೊಂದಿಗೆ ಸಹಕರಿಸಬೇಕು. ಮಾರುಕಟ್ಟೆ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಲು ನಿರಂತರ ನಿಗಾ ಹಾಗೂ ಅಗತ್ಯವಿರುವ ಕಡೆಗಳಲ್ಲಿ ವಿಶೇಷ ಸ್ವಚ್ಛತಾ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಜಗದೀಶ್.ಜಿ ತಿಳಿಸಿದ್ದಾರೆ.