Home ಜಿಲ್ಲೆ ಮೈಸೂರು ಸೆಸ್ಕ್‍ನಿಂದ 6 ದಿನಗಳ ಪ್ರವೇಶಾತಿ ತರಬೇತಿ ಆರಂಭ

ಸೆಸ್ಕ್‍ನಿಂದ 6 ದಿನಗಳ ಪ್ರವೇಶಾತಿ ತರಬೇತಿ ಆರಂಭ

ಸಂಜೆವಾಣಿ ನ್ಯೂಸ್
ಮೈಸೂರು: ಸೆ.01:-
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ವತಿಯಿಂದ ನೂತನವಾಗಿ ನೇಮಕಗೊಂಡ ಜೂನಿಯರ್ ಪವರ್‍ಮ್ಯಾನ್‍ಗಳ 4ನೇ ತಂಡಕ್ಕೆ 6 ದಿನಗಳ ಪ್ರವೇಶಾತಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮೈಸೂರಿನ ಕಡಕೊಳದಲ್ಲಿರುವ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಆಯೋಜಿಸಿರುವ ತರಬೇತಿಯ ಮೊದಲ ದಿನ ವಿದ್ಯುತ್ ವಿತರಣಾ ವ್ಯವಸ್ಥೆ, ಟ್ರಾನ್ಸ್‍ಫಾರ್ಮರ್ ನಿರ್ವಹಣೆ, ಸುರಕ್ಷತಾ ಕ್ರಮಗಳು ಮತ್ತು ವಿದ್ಯುತ್ ಕಳ್ಳತನ ತಡೆ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ಮತ್ತು ವಿಡಿಯೋ ಮೂಲಕ ತರಬೇತಿ ನೀಡಲಾಯಿತು.

ಗ್ರಾಹಕರೊಂದಿಗೆ ಸೌಹಾರ್ದತೆಯಿಂದ ವರ್ತಿಸಿ:
ತರಬೇತಿ ಶಾಖೆಯ ಉಪ ಪ್ರಧಾನ ವ್ಯವಸ್ಥಾಪಕಿ ಎಂ.ವೈ.ಹೇಮಾ ಮಾತನಾಡಿ, ಪವರ್‍ಮ್ಯಾನ್‍ಗಳು ಗ್ರಾಹಕರು ಮತ್ತು ಸೆಸ್ಕ್ ನಡುವಿನ ಸೇತುವೆ. ಗ್ರಾಹಕರೊಂದಿಗೆ ಸಂಯಮ, ಸಹನೆ, ಸೌಹಾರ್ದತೆಯಿಂದ ವರ್ತಿಸಿ, ಅಡಚಣೆರಹಿತ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು. ಕರ್ತವ್ಯದಲ್ಲಿ ತಪ್ಪುಗಳಾದಾಗ ವಿಳಂಬವಿಲ್ಲದೆ ಸರಿಪಡಿಸಬೇಕು, ಜೀವಕ್ಕೆ ಹಾನಿಯಾಗುವ ತಪ್ಪು ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ನಂತರದ ಅವಧಿಗಳಲ್ಲಿ ಜೂನಿಯರ್ ಪವರ್‍ಮ್ಯಾನ್‍ಗಳ ಕರ್ತವ್ಯ ಮತ್ತು ಲೈನ್ ಸಂರಕ್ಷಣೆ ಕುರಿತು ನಿವೃತ್ತ ಅಧೀಕ್ಷಕ ಇಂಜಿನಿಯರ್ ವೈರಮುಡಿ, ಟ್ರಾನ್ಸ್‍ಫಾರ್ಮರ್ ನಿರ್ವಹಣೆ ಕುರಿತು ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಸಿ.ಮೋಹನ್ ಶಂಕರ್ ಮತ್ತು ವಿದ್ಯುತ್ ಸುರಕ್ಷತೆ ಕುರಿತು ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ಎಸ್.ವಿಶ್ವನಾಥ್ ತರಬೇತಿ ನೀಡಿದರು.

6 ದಿನಗಳ ತರಬೇತಿಯಲ್ಲಿ ವಿದ್ಯುತ್ ಮಾಪಕಗಳು, ಬಿಲ್ಲಿಂಗ್, ದರ ನಿಗದಿ, ಎಸ್‍ಒಪಿ, ಅರ್ಥಿಂಗ್, ವಿದ್ಯುತ್ ಕಳ್ಳತನ ಪತ್ತೆ, ಸೇವಾ ನಿಯಮಗಳು, ಪ್ರಥಮ ಚಿಕಿತ್ಸೆ ಸೇರಿದಂತೆ 220 ಕೆವಿ ವಿದ್ಯುತ್ ಕೇಂದ್ರ, ಟ್ರಾನ್ಸ್‍ಫಾರ್ಮರ್ ದುರಸ್ತಿ ಕೇಂದ್ರ ಮತ್ತು ಮೀಟರ್ ಪರೀಕ್ಷಾ ಪ್ರಯೋಗಾಲಯಗಳ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ.

ಈ ಸಂದರ್ಭದಲ್ಲಿ ತರಬೇತಿ ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಎನ್.ಜ್ಯೋತಿ, ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ತರಬೇತಿ ಸಂಸ್ಥೆಯ ಪ್ರಾಂಶುಪಾಲ ನಿವೃತ್ತ ಅಧೀಕ್ಷಕ ಇಂಜಿನಿಯರ್ ಜೆ.ಬಿ.ಯೋಗೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.