
ಸಂಜೆವಾಣಿ ನ್ಯೂಸ್
ಮೈಸೂರು: ಸೆ.01:– ಕುಮಾರಸ್ವಾಮಿ ಅವರ ಚಿಂತನೆಗಳು ಆಗಾಗ ಬದಲಾಗುತ್ತಿರುತ್ತವೆ. ಅವರು ಯಾವ ಬಾಂಬ್ ಸಿಡಿಸಲಿದ್ದಾರೆ ಎಂಬ ಕುತೂಹಲ ನಮಗೂ ಇದೆ. ಬಹುಶಃ ಕರ್ನಾಟಕದ ಅಭಿವೃದ್ಧಿಗಾಗಿ ಮೇಕೆದಾಟು ಯೋಜನೆಗೆ ಕೇಂದ್ರದಿಂದ ಒಪ್ಪಿಗೆ ಕೊಡಿಸುವ ಅಭಿವೃದ್ಧಿ ಬಾಂಬ್ ಇರಬಹುದು ಎಂದು ಸಚಿವ ಹೆಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಕುಮಾರಸ್ವಾಮಿ ದಾಖಲೆ ಬಾಂಬ್‍ಗೆ ವ್ಯಂಗ್ಯವಾಡಿದ ಅವರು, ಅವರು ನಮ್ಮ ಹಳೆಯ ಸ್ನೇಹಿತರು. ಆದರೆ, ಅವರ ತಲೆಯಲ್ಲಿ ಏನು ಓಡುತ್ತಿದೆ ಎಂಬುದು ನಮಗೆ ಹೇಗೆ ಗೊತ್ತಾಗಬೇಕು? ಅವರನ್ನು ಕರ್ನಾಟಕದ ಅಭಿವೃದ್ಧಿ ಮಾಡಿ ಎಂದು ಕೇಂದ್ರ ಸಚಿವರನ್ನಾಗಿ ಮಾಡಿದ್ದೇವೆ. ಅವರು ಅಭಿವೃದ್ಧಿ ವಿಚಾರದ ಬಾಂಬ್ ಸಿಡಿಸಬಹುದು ಎಂದು ತಿರುಗೇಟು ನೀಡಿದರು.
ಬಿಜೆಪಿಯ ಪಾದಯಾತ್ರೆ ಹಾಗೂ ಮಾಜಿ ಸಚಿವ ನಾಗೇಂದ್ರ ಪ್ರಕರಣದ ಕುರಿತು ಮಾತನಾಡಿದ ಅವರು, ನಾಗೇಂದ್ರ ಅಪರಾಧಿಯಲ್ಲ, ಕೇವಲ ಆರೋಪಿ. ಹಣ ವಾಪಸಾತಿ ಸೇರಿದಂತೆ ಎಲ್ಲವೂ ಕೋರ್ಟ್‍ನಲ್ಲಿ ತೀರ್ಮಾನವಾಗಲಿದೆ. ನ್ಯಾಯಾಲಯದ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ. ನಾಗೇಂದ್ರ ಅವರ ರಾಜೀನಾಮೆಯಿಂದ ಸರ್ಕಾರಕ್ಕೇನೂ ಮುಜುಗರವಾಗಿಲ್ಲ. ರಾಜಕಾರಣದಲ್ಲಿ ಇಂತಹ ಸಣ್ಣಪುಟ್ಟ ವ್ಯತ್ಯಾಸಗಳು ಸಹಜ. ವಿರೋಧ ಪಕ್ಷದವರು ನಮ್ಮನ್ನು ಹೊಗಳಲು ಪಾದಯಾತ್ರೆ ಮಾಡುತ್ತಿದ್ದಾರೆ, ಮಾಡಲಿ ಎಂದರು.
ಗ್ರಾಮೀಣ ಭಾಗದ ತೆರಿಗೆ ಸಮಸ್ಯೆಯ ಕುರಿತು ಪ್ರತಿಕ್ರಿಯಿಸಿ, ರಾಜ್ಯದ ಶೇ.40ರಷ್ಟು ಜನ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಕಡ್ಡಾಯವಾಗಿ ತೆರಿಗೆ ವಸೂಲಿ ಮಾಡಬೇಕಾದರೆ, ಮೊದಲು ಜನರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವುದು ನಮ್ಮ ಆದ್ಯತೆ ಎಂದರು.
ಹಂತ ಹಂತವಾಗಿ ಸುಧಾರಣೆ: ಎಲ್ಲಾ ವಿಭಾಗಗಳ ವರದಿ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ನಾನು ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದು, ಪ್ರತಿಯೊಂದನ್ನೂ ಪರಿಶೀಲಿಸುತ್ತಿದ್ದೇನೆ. ಒಂದೇ ಬಾರಿಗೆ ಎಲ್ಲವನ್ನೂ ಸರಿಮಾಡಲು ಸಾಧ್ಯವಿಲ್ಲ, ಹಂತ ಹಂತವಾಗಿ ಸರಿಪಡಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸುತ್ತೂರು ಮಠಕ್ಕೆ ಭೇಟಿ: ಸಚಿವರಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ ಹೆಚ್.ಸಿ.ಬಾಲಕೃಷ್ಣ ಸುತ್ತೂರು ಮಠಕ್ಕೆ ತೆರಳಿ ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಆಶೀರ್ವಾದ ಪಡೆದರು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಸೇರಿದಂತೆ ಹಲವರು ಇದ್ದರು.

































