
ಉಳ್ಳಾಲ: ಊಟದ ಸಾಂಬಾರಿನಲ್ಲಿ ಜಿರಳೆ ಪತ್ತೆಯಾಗಿದೆ ಎಂದು ಗ್ರಾಹಕನೊಬ್ಬ ನೀಡಿ ದೂರಿನ ಹಿನ್ನೆಲೆಯಲ್ಲಿ, ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಅವರು ತೊಕ್ಕೊಟ್ಟುವಿನ ಪ್ರಸಿದ್ಧ ‘ವೃಂದಾವನ’ ಹೋಟೆಲ್ಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಮಧ್ಯಾಹ್ನ ೧:೩೦ರ ಸುಮಾರಿಗೆ ಚಾಲಕನೊಂದಿಗೆ ಹೋಟೆಲ್ಗೆ ಆಗಮಿಸಿದ ಅಧಿಕಾರಿಗಳು, ಬಾಗಿಲಿನ ಶಟರ್ ಹಾಕಿ ಅಡುಗೆ ಕೋಣೆಯ ತಪಾಸಣೆ ನಡೆಸಿದರು. ಈ ವೇಳೆ ಅಡುಗೆ ಕೋಣೆಯಲ್ಲಿ ತೀವ್ರ ಅಶುಚಿತ್ವ ಹಾಗೂ ನಿಯಮಗಳ ಉಲ್ಲಂಘನೆ ಕಂಡುಬಂದಿದೆ.
ದಾಳಿಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಾ. ಪ್ರವೀಣ್ ಕುಮಾರ್, “ಸಾಂಬಾರಿನಲ್ಲಿ ಜಿರಳೆ ಬಿದ್ದಿರುವ ಬಗ್ಗೆ ಗ್ರಾಹಕರೊಬ್ಬರು ದೂರು ನೀಡಿದ್ದರು. ಪರಿಶೀಲನೆ ನಡೆಸಿದಾಗ ಅಡುಗೆ ಕೋಣೆಯಲ್ಲಿ ಆಹಾರ ಸಾಮಗ್ರಿಗಳನ್ನು ದಾಸ್ತಾನು ಮಾಡಲು ಪ್ರತ್ಯೇಕ ಕೊಠಡಿ ಇಲ್ಲದಿರುವುದು ಬೆಳಕಿಗೆ ಬಂದಿದೆ. ಎಲ್ಲೆಂದರಲ್ಲಿ ಆಹಾರ ಪದಾರ್ಥಗಳನ್ನು ರಾಶಿ ಹಾಕಲಾಗಿತ್ತು,” ಎಂದು ತಿಳಿಸಿದರು.
ಅಧಿಕಾರಿಗಳು ತಕ್ಷಣವೇ ಸ್ಥಳದಲ್ಲಿದ್ದುಕೊಂಡು ಎಲ್ಲ ಆಹಾರ ಪದಾರ್ಥಗಳನ್ನು ತೆರವುಗೊಳಿಸಿ, ಇಡೀ ಅಡುಗೆ ಕೋಣೆಯನ್ನು ತೊಳೆಸಿ ಶುಚಿಗೊಳಿಸುವಂತೆ ಕ್ರಮ ಕೈಗೊಂಡರು.
ಆಹಾರ ತಯಾರಿಕೆಯಲ್ಲಿ ಶುಚಿತ್ವ ಕಾಪಾಡದೆ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಹೋಟೆಲ್ ಮಾಲಕರಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಜತೆಗೆ ಈ ಸಂಬಂಧ ಅಪರ ಜಿಲ್ಲಾಧಿಕಾರಿ (ಎಡಿಸಿ) ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.































