
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.05-ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ವಿರುದ್ಧ ದುರುದ್ದೇಶಪೂರ್ವಕವಾಗಿ ನೀಡುತ್ತಿರುವ ಸುಳ್ಳು ದೂರುಗಳನ್ನು ಖಂಡಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಸಂಘದ ಪದಾಧಿಕಾರಿಗಳು, ಸದಸ್ಯರು ಕೆಲಕಾಲ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ಆರ್.ಎನ್. ಸಿದ್ದಲಿಂಗಸ್ವಾಮಿ ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 95 ವರ್ಷಗಳ ಇತಿಹಾಸವಿದ್ದು, ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲೂ ಘಟಕಗಳನ್ನು ಹೊಂದಿರುವ ಬೃಹತ್ ಸಂಘಟನೆಯಾಗಿದೆ. ಚುನಾವಣಾ ಪ್ರಕ್ರಿಯೆ ಮೂಲಕ ಆಯ್ಕೆಯಾಗಿರುವ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ವಿರುದ್ಧ ಇತ್ತೀಚೆಗೆ ಸ್ವಯಂಘೋಷಿತ ಸಂಘಟನೆಯೊಂದರ ಮೂಲಕ ವಿವಿಧೆಡೆ ದೂರುಗಳನ್ನು ನೀಡುತ್ತಿರುವುದು ಖಂಡನೀಯ ಎಂದರು.
ಶಿವಾನಂದ ತಗಡೂರು ಅವರು ರಂಗಭೂಮಿ ಕ್ಷೇತ್ರದಿಂದ ಬೆಳೆದು ಬಂದಿದ್ದು, ನಾಟಕ ಆಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಸಂಘವು ತನ್ನ ಸಂಘಟನಾತ್ಮಕ ಚಟುವಟಿಕೆಗಳನ್ನು ಪಾರದರ್ಶಕವಾಗಿ ನಡೆಸಿಕೊಂಡು ಬರುತ್ತಿದ್ದು, ಕಾಲಕಾಲಕ್ಕೆ ರಾಜ್ಯ ಸಮಿತಿ ಸಭೆ ಹಾಗೂ ವಾರ್ಷಿಕ ಮಹಾಸಭೆಗಳನ್ನು ನಡೆಸಲಾಗುತ್ತಿದೆ. ತಗಡೂರು ಅವರ ಅವಧಿಯಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 1.1 ಕೋಟಿ ಠೇವಣಿ ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ದೊರಕಿಸಿಕೊಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಸಂಘದ ರಾಜ್ಯಾಧ್ಯಕ್ಷರ ವಿರುದ್ಧ ನೀಡುತ್ತಿರುವ ದೂರುಗಳನ್ನು ಪರಿಗಣಿಸಬಾರದು. ಅಲ್ಲದೇ ದುರುದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್, ರಾಜ್ಯ ಸಮಿತಿ ಸದಸ್ಯ ಮಹೇಂದ್ರ, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಚಿಕ್ಕಮಾಳಿಗೆ, ಹನೂರು ತಾಲೂಕು ಅಧ್ಯಕ್ಷ ದೇವರಾಜನಾಯ್ಡು, ಮಾಜಿ ಅಧ್ಯಕ್ಷ ಮಾದೇಶ್, ಯಳಂದೂರು ತಾಲೂಕು ಅಧ್ಯಕ್ಷ ವಿ.ನಾಗರಾಜು, ಹಿರಿಯ ಪತ್ರಕರ್ತ ಎ.ಡಿ. ಸಿಲ್ವಾ, ಜಿಲ್ಲಾ ಪದಾಧಿಕಾರಿಗಳಾದ ಫಾಲಲೋಚನ ಆರಾಧ್ಯ, ಬದನಗುಪ್ಪೆ ಮಲ್ಲಣ್ಣ, ಮಹೇಶ್, ಬಸವರಾಜು, ಪ್ರಮೋದ್, ಚರಣ್ ಬಿಳಿಗಿರಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
ನಂತರ ಸ್ಥಳಕ್ಕಾಗಮಿಸಿದ ಎಡಿಸಿ ಜವರೇಗೌಡ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.


























