Home ಜಿಲ್ಲೆ ಮೈಸೂರು ಮೈಸೂರಿನಲ್ಲಿ ಗ್ರಾಹಕರಿಗೆ ಶಾಕ್: ಕಂತು ಯೋಜನೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ

ಮೈಸೂರಿನಲ್ಲಿ ಗ್ರಾಹಕರಿಗೆ ಶಾಕ್: ಕಂತು ಯೋಜನೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ

ಸಂಜೆವಾಣಿ ನ್ಯೂಸ್
ಮೈಸೂರು, ಸೆ.03:-
ಬಹುಕೋಟಿ ಚಿನ್ನದ ಹಗರಣದ ಚರ್ಚೆ ತಣ್ಣಗಾಗುವ ಮುನ್ನವೇ ಮೈಸೂರಿನಲ್ಲಿ ಮತ್ತೊಂದು ಚಿನ್ನದ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಚಿನ್ನ ನೀಡುವುದಾಗಿ ಮಾಸಿಕ ಕಂತುಗಳಲ್ಲಿ ಹಣ ಕಟ್ಟಿಸಿಕೊಂಡು ಜುವೆಲ್ಲರಿ ಮಾಲೀಕರು ನಾಪತ್ತೆಯಾಗಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ನಗರದ ವಿವೇಕಾನಂದ ವೃತ್ತದಲ್ಲಿರುವ ಮೋಹನ್ ಜುವೆಲ್ಲರಿ ವಿರುದ್ಧ ನೂರಾರು ಗ್ರಾಹಕರು ವಂಚನೆ ಆರೋಪ ಮಾಡಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿ ಕಂತು ಕಟ್ಟಿಸಿಕೊಂಡ ಗ್ರಾಹಕರಿಗೆ ಚಿನ್ನ ನೀಡಿ ನಂಬಿಕೆ ಗಳಿಸಿದ್ದ ಸಂಸ್ಥೆ, ಈ ಬಾರಿ ಹೆಚ್ಚಿನ ಮೊತ್ತದ ಹಣವನ್ನು ಹೂಡಿಕೆ ಮಾಡಿಸಿಕೊಂಡಿದೆ ಎನ್ನಲಾಗಿದೆ.

ಆದರೆ ಕಳೆದ ಒಂದು ವಾರದಿಂದ ಜುವೆಲ್ಲರಿ ಅಂಗಡಿ ಬಾಗಿಲು ಮುಚ್ಚಿದ್ದು, ಮಾಲೀಕರ ಮನೆಯೂ ಖಾಲಿಯಾಗಿರುವುದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.

ಹಣ ಕಳೆದುಕೊಂಡಿರುವ ಆತಂಕದಲ್ಲಿ ನೂರಾರು ಗ್ರಾಹಕರು ಅಂಗಡಿ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುವೆಂಪುನಗರ ಪೆÇಲೀಸ್ ಠಾಣೆಯಲ್ಲಿ ಹಲವರು ದೂರು ದಾಖಲಿಸಿ ತಮ್ಮ ಹಣವನ್ನು ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಪೆÇಲೀಸರು ಜುವೆಲ್ಲರಿ ಮಾಲೀಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಎಷ್ಟು ಮೊತ್ತದ ವಂಚನೆಯಾಗಿದೆ ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ. ಚಿನ್ನದ ಹೆಸರಿನಲ್ಲಿ ಕಂತು ಕಟ್ಟಿ ಕೊನೆಗೆ ಹಣವೂ ಇಲ್ಲ, ಚಿನ್ನವೂ ಇಲ್ಲದಂತಾಗಿದ್ದು, ನೊಂದ ಗ್ರಾಹಕರು ನ್ಯಾಯಕ್ಕಾಗಿ ಪೆÇಲೀಸರ ಮೊರೆ ಹೋಗಿದ್ದಾರೆ.