Home ಜಿಲ್ಲೆ ಮೈಸೂರು ಮೇವು ನೀರು ಒದಗಿಸುಂವಂತೆ ಆಗ್ರಹ: ಜನಧ್ವನಿ ವೆಂಕಟೇಶ್ ನೇತೃತ್ವದ ಪ್ರತಿಭಟನೆ

ಮೇವು ನೀರು ಒದಗಿಸುಂವಂತೆ ಆಗ್ರಹ: ಜನಧ್ವನಿ ವೆಂಕಟೇಶ್ ನೇತೃತ್ವದ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಹನೂರು.ಸೆ.13:
ತಾಲೂಕಿನಾದ್ಯಂತ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ತಕ್ಷಣ ಮೇವು ನೀರು ಒದಗಿಸಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಜನಧ್ವನಿ ವೆಂಕಟೇಶ್ ನೇತೃತ್ವದಲ್ಲಿ ಬಿಜೆಪಿ ಮಂಡಲ ವತಿಯಿಂದ ಇಂದು ಶನಿವಾರ ಸಂಜೆ ವೇಳೆಗೆ ಕೌದಳ್ಳಿ ಗ್ರಾಮದಲ್ಲಿ ಪ್ರತಿಭಟನೆ ನಡೆಯಿತು.
ತಾಲೂಕಿನ ಕೌದಳ್ಳಿ ಮುಖ್ಯ ವೃತ್ತದಲ್ಲಿ ಜಮಾಯಿಸಿದ ಹನೂರು ಬಿಜೆಪಿ ಮಂಡಲ ಮತ್ತು ಮಲೆ ಮಹದೇಶ್ವರ ಬಿಜೆಪಿ ಮಂಡಲ ಕಾರ್ಯಕರ್ತ ಮುಖಂಡರುಗಳು ಸಾರ್ವಜನಿಕ ಪ್ರತಿಭಟನಾಕಾರರು ಆಡಳಿತ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಇದೇವೇಳೆ ಮಾತನಾಡಿದ ಬಿಜೆಪಿ ಓಬಿಸಿ ಘಟಕದ ಜಿಲ್ಲಾ ಅಧ್ಯಕ್ಷ ಜನಧ್ವನಿ ವೆಂಕಟೇಶ್ ಅವರು ಮಳೆ ಕೊರತೆಯಿಂದಾಗಿ ಜನರು ಮತ್ತು ಜಾನುವಾರುಗಳು ಕುಡಿಯುವ ನೀರು ಹಾಗೂ ಮೇವಿನ ಕೊರತೆಯಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆಯ ಅಭಾವದಿಂದ ಕೆರೆ, ಹಳ್ಳ ಸೇರಿದಂತೆ ಜಲಮೂಲಗಳು ಬತ್ತಿ ಹೋಗಿದ್ದು, ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.


ಕುರಟ್ಟಿ ಹೊಸೂರು ಗ್ರಾಮದಲ್ಲಿ ಜಾನುವಾರುಗಳಿಗೆ ಮೇವು ನೀರಿಲ್ಲದೆ ಸಾವನ್ನಪ್ಪಿರುವ ಘಟನೆಯೂ ನಡೆದಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅಲ್ಲದೆ ತಾಲ್ಲೂಕಿನಾದ್ಯಂತ ರೈತರು ಜಮೀನುಗಳಲ್ಲಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ಸಂಕಷ್ಟದಲ್ಲಿ ಬದುಕುವಂತಾಗಿದೆ.
ಆಡಳಿತ ಸರ್ಕಾರ ಇದನ್ನು ಗಮನಿಸಿ ಹನೂರು ತಾಲ್ಲೂಕಿನ ಜನರಿಗೆ ತಕ್ಷಣ ನೆರವು ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಇನ್ನಷ್ಟು ಉಗ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನಟರಾಜು ಗೌಡ, ಹೊನ್ನೂರು ಮಹದೇವಸ್ವಾಮಿ, ಹನೂರು ಬಿಜೆಪಿ ಮಂಡಲ ಅಧ್ಯಕ್ಷ ವೃಷಭೇಂದ್ರ ಸ್ವಾಮಿ, ಮಹದೇಶ್ವರ ಬೆಟ್ಟ ಮಂಡಲ ಅಧ್ಯಕ್ಷ ಮುರುಗ, ಯುವ ಮೋರ್ಚಾ ಅಧ್ಯಕ್ಷ ಚಿರಂಜೀವಿ, ವಿಜಯಕುಮಾರ್, ಪೆÇನ್ನಾಚಿ ಜಯಪ್ರಕಾಶ್ ಸೇರಿದಂತೆ ಇನ್ನಿತರರು ಇದ್ದರು.