Home ಜಿಲ್ಲೆ ಮೈಸೂರು ಮಾನವ ಹಕ್ಕುಗಳ ಉಲ್ಲಂಘನೆಗೆ ಕಟ್ಟುನಿಟ್ಟಿನ ತಡೆ

ಮಾನವ ಹಕ್ಕುಗಳ ಉಲ್ಲಂಘನೆಗೆ ಕಟ್ಟುನಿಟ್ಟಿನ ತಡೆ

ಸಂಜೆವಾಣಿ ನ್ಯೂಸ್
ಮೈಸೂರು, ಸೆ.04:-
ಮಾನವ ಅಕ್ರಮ ಸಾಗಣೆಯು ವ್ಯಕ್ತಿಯ ಘನತೆ, ದೈಹಿಕ ಸ್ವಾಸ್ಥ್ಯ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಗಂಭೀರ ಆಕ್ರಮಣವಾಗಿದೆ. ಸಂತ್ರಸ್ತರ ಪುನರ್ವಸತಿಯು ಕೇವಲ ಸರ್ಕಾರದ ನೀತಿಗೆ ಸಂಬಂಧಿಸಿದ ವಿಷಯವಲ್ಲ, ಬದಲಾಗಿ ಅದು ಭಾರತೀಯ ಸಂವಿಧಾನದ 21ನೇ ವಿಧಿಯಡಿ ಘನತೆಯುಳ್ಳ ಜೀವನದ ಹಕ್ಕಿನ ಅವಿಭಾಜ್ಯ ಅಂಗವಾಗಿದೆ, ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ಜೀವಿಸುವ ಹಕ್ಕನ್ನು’ ಹೊಂದಿದ್ದಾನೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಉಷಾರಾಣಿ ಅವರು ಹೇಳಿದರು.

ಇಂದು ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಹಾಗೂ ಉದಯ ಹೆಜ್ಜೆ ವಿಮೋಚಿತ ಜೀತ ಕಾರ್ಮಿಕರ ಒಕ್ಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುದರು.

ವಿಶ್ವಸಂಸ್ಥೆಯು 2013 ರಿಂದ ಜುಲೈ 30ನ್ನು ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನವೆಂದು ಆಚರಿಸುತ್ತಿದ್ದು, ಇದು ಕೇವಲ ಆಚರಣೆಯಲ್ಲ, ಆತ್ಮಾವಲೋಕನ ಹಾಗೂ ಸಮಾಜವನ್ನು ಎಚ್ಚರಿಸುವ ದಿನವಾಗಿದೆ. ಪ್ರಸಕ್ತ ವರ್ಷದ ಧೇಯವಾಕ್ಯ”  ಟ್ರ್ಯಾಪ್ಡ್ ಬಿಹೈಂಡ್ ದಿ ಸ್ಕ್ಯಾಮ್”   ಎಂಬ ಉದ್ದೇಶದೊಂದಿಗೆ ಆನ್‍ಲೈನ್ ಸೈಬರ್ ಅಪರಾಧಗಳು ಹಾಗೂ ವಂಚನೆಗಳ ಮೂಲಕ ಜನರನ್ನು ಕಳ್ಳಸಾಗಣೆಗೆ ಗುರಿಪಡಿಸುವ ಹೊಸ ಜಾಲಗಳ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಮಾನವ ಕಳ್ಳಸಾಗಣೆಯಿಂದ ಬದುಕುಳಿದವರ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಪುನರ್ವಸತಿಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಸಕಾರಾತ್ಮಕ ಬಾಧ್ಯತೆಯಾಗಿದೆ.   ಮಾನವ ಅಕ್ರಮ ಸಾಗಣೆ ತಡೆಯುವುದು ಕೇವಲ ಪೆÇಲೀಸ್ ಅಥವಾ ಸರ್ಕಾರದ ಕೆಲಸವಲ್ಲ. ಅಪರಿಚಿತರ ಬಗ್ಗೆ ಅನುಮಾನ ಬಂದಲ್ಲಿ ತಕ್ಷಣವೇ ಪೆÇೀಷಕರು, ಶಿಕ್ಷಕರು ಅಥವಾ ಅಧಿಕಾರಿಗಳಿಗೆ ತಿಳಿಸುವಂತೆ ಮಕ್ಕಳಿಗೆ ಜಾಗೃತಿ ಮೂಡಿಸುವುದು ಸಮಾಜದ ಕರ್ತವ್ಯ ಎಂದರು.

ಇತ್ತೀಚೆಗೆ ಸೋಸಲೆ ಹೋಬಳಿಯ ದೇವನಹಳ್ಳಿಯ ಇಟ್ಟಿಗೆ ಗೂಡುಗಳ ಮೇಲೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೆÇಲೀಸ್, ಕಂದಾಯ ಇಲಾಖೆ ಹಾಗೂ ಓಉಔಗಳು ನಡೆಸಿದ ಜಂಟಿ ದಾಳಿಯಲ್ಲಿ 18 ಹಿರಿಯರು ಮತ್ತು 7 ಮಕ್ಕಳನ್ನು ರಕ್ಷಿಸಿ, ಬಿಡುಗಡೆ ಪ್ರಮಾಣಪತ್ರ ನೀಡಲಾಗಿತ್ತು. ಬಡತನ, ನಿರುದ್ಯೋಗ, ದುರಭ್ಯಾಸಗಳು, ಆನ್‍ಲೈನ್ ಮೋಸಗಳು, ಸಿನಿಮಾದಲ್ಲಿ ಅವಕಾಶ ಮತ್ತು ವಿದೇಶಿ ಕೆಲಸದಂತಹ ಸುಳ್ಳು ಭರವಸೆಗಳಿಂದ ಜನರು ಈ ಜಾಲಕ್ಕೆ ಬೀಳುತ್ತಿದ್ದಾರೆ. ಶೇಕಡಾ 60ಕ್ಕಿಂತ ಹೆಚ್ಚು ಸಂತ್ರಸ್ತರು ಮಹಿಳೆಯರು ಮತ್ತು 18 ವರ್ಷದೊಳಗಿನ ಮಕ್ಕಳಾಗಿದ್ದಾರೆ ಎಂದು ಹೇಳಿದರು.

ಅಪರಾಧಿಗಳಿಗೆ 10 ವರ್ಷದಿಂದ ಜೀವಾವಧಿವರೆಗೆ ಶಿಕ್ಷೆ ವಿಧಿಸುವ ಕಾನೂನುಗಳಿದ್ದು, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 143, ಬಾಲಕಾರ್ಮಿಕ ಕಾಯ್ದೆ ಹಾಗೂ ಸುಪ್ರೀಂ ಕೋರ್ಟ್‍ನ ಮೇನಕಾ ಗಾಂಧಿ, ವಿಶಾಖ ಮತ್ತು ಪ್ರಜ್ವಲ ಪ್ರಕರಣದ ಪ್ರಮುಖ ತೀರ್ಪುಗಳು ಸಂವಿಧಾನಬದ್ಧ ಜೀವಿಸುವ ಹಕ್ಕನ್ನು ಎತ್ತಿಹಿಡಿದಿವೆ.

ಕೇವಲ ಸರಕಾರ ಮತ್ತು ಇಲಾಖೆಗಳು ಮಾತ್ರವಲ್ಲದೆ ಪ್ರತಿಯೊಬ್ಬ ನಾಗರಿಕನು ಜಾಗೃತರಾಗಿ ಸಮಾಜದ ಮುಗ್ಧರನ್ನು ಮತ್ತು ಮಕ್ಕಳನ್ನು ರಕ್ಷಿಸಲು ಕೈಜೋಡಿಸಬೇಕೆಂದು ಹೇಳಿದರು.
ವಿಕಾಸ ಸಂಸ್ಥೆಯ ಅಧ್ಯಕ್ಷರಾದ ವರ್ಗಿಸ್ ಕ್ಲೀಟಸ್ ಅವರು ಮಾತನಾಡಿ   ಜೀತಪದ್ಧತಿಯು ಕೇವಲ ಸರಪಳಿಯಿಂದ ಬಂಧಿಸುವುದಷ್ಟೇ ಅಲ್ಲ  ಇಂದು ಬಿಹಾರ, ತಮಿಳುನಾಡು, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶಗಳಿಂದ ಕೆಲಸ ಹುಡುಕಿಕೊಂಡು ಬರುವ ಬಡ ಕಾರ್ಮಿಕರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ ಶೋಷಿಸಲಾಗುತ್ತಿದೆ.  ಮೈಸೂರು, ಚಿಕ್ಕಮಗಳೂರು, ಮಂಡ್ಯ, ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕಾಫಿ ತೋಟಗಳು, ಕ್ವಾರಿಗಳು, ಕಬ್ಬು ಕಡಿಯುವ ಕ್ಷೇತ್ರಗಳು ಮತ್ತು ಶೂಟಿಂಗ್ ತೋಟಗಳಲ್ಲಿ ಇಂತಹ ಶೋಷಣೆಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದರು.

1976ರ ಜೀತಪದ್ಧತಿ ರದ್ದತಿ ಕಾಯ್ದೆಯಡಿ ಸಂತ್ರಸ್ತರನ್ನು ಬಿಡುಗಡೆಗೊಳಿಸಲು ಕಂದಾಯ, ಕಾರ್ಮಿಕ ಹಾಗೂ ಸಮಾಜ ಕಲ್ಯಾಣ ಸೇರಿದಂತೆ ಸುಮಾರು 23 ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ಎಫ್‍ಐಆರ್ ದಾಖಲಿಸುವಲ್ಲಿ ಎದುರಾಗುವ ತೊಡಕುಗಳನ್ನು ನಿವಾರಿಸಿ, ಬಿಡುಗಡೆಯಾದ ತಕ್ಷಣ ನೀಡಬೇಕಾದ 30,000 ಪುನರ್ವಸತಿ ನೆರವನ್ನು ತಲುಪಿಸಬೇಕು. 2019ರಲ್ಲಿ ಆಗಿನ ಆರ್‍ಡಿಪಿಆರ್ ನಿರ್ದೇಶಕರಾದ ರೇವಣಪ್ಪ ಅವರಿಂದ ಉದ್ಘಾಟನೆಗೊಂಡ ಉದಯೋನ್ಮುಖ ಒಕ್ಕೂಟವು ಈಗಾಗಲೇ 150ಕ್ಕೂ ಹೆಚ್ಚು ಜೀತದಾಳುಗಳನ್ನು ಮುಕ್ತಗೊಳಿಸಿ ಅವರ ಪುನರ್ವಸತಿಗೆ ಶ್ರಮಿಸಿದೆ. ಈ ಸಂಸ್ಥೆಯು ಬ್ಯಾಗ್ ಹಾಗೂ ಪೌಚ್‍ಗಳ ತಯಾರಿಕೆ ಮೂಲಕ ಸ್ವಾವಲಂಬನೆ ಕಂಡುಕೊಂಡಿದೆ ಎಂದು ಹೇಳಿದರು.

ಉದಯ ಹೆಜ್ಜೆ ಮೈಸೂರು ವಿಭಾಗೀಯ ಒಕ್ಕೂಟವು ಮೈಸೂರು ವಿಭಾಗ ಮಟ್ಟದಲ್ಲಿ ಜೀತಮುಕ್ತರಾದವರನ್ನು ಒಂದೇ ವೇದಿಕೆಯಲ್ಲಿ ಸಂಘಟಿಸಿ, ಸ್ಥಳೀಯ ನಾಯಕತ್ವ ಬೆಳೆಸಲು ಹಾಗೂ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ಉದಯ ಹೆಜ್ಜೆ ವೇದಿಕೆಯನ್ನು ರೂಪಿಸಲಾಗಿದೆ ಎಂದರು.

ಜೀತಪದ್ಧತಿಯಿಂದ ಬಿಡುಗಡೆಯಾದ ಫಲಾನುಭವಿ ಯೊಬ್ಬರು ಮಾತನಾಡಿ  ಸ್ವಂತ ಮನೆ ಕಟ್ಟಿಕೊಳ್ಳುವ ಮತ್ತು ಕುಟುಂಬವನ್ನು ಉತ್ತಮವಾಗಿ ನೋಡಿಕೊಳ್ಳುವ ಆಸೆಯಿಂದ ಮೇಸ್ತ್ರಿಯೊಬ್ಬರಿಂದ ಮುಂಗಡ ಹಣ ಪಡೆದುಕೊಂಡಿದ್ದೆ. ಆದರೆ  ಈ ಮುಂಗಡ ಹಣವೇ ಅವರನ್ನು ಜೀತ ಪದ್ಧತಿಯ ಕತ್ತಲೆಗೆ ತಳ್ಳಿತ್ತು. ಹೊಳೆನರಸೀಪುರ, ನಂಜನಗೂಡು, ಚನ್ನಪಟ್ಟಣ, ಹೊಳೆನರಸಂದಿ ಹಾಗೂ ಅಕ್ಕಪಕ್ಕದ ಗ್ರಾಮಗಳ ಕಬ್ಬು ಕತ್ತರಿಸುವ ತೋಟಗಳಲ್ಲಿ ನಮ್ಮ ಕುಟುಂಬವನ್ನು ಅಮಾನವೀಯ ಸ್ಥಿತಿಯಲ್ಲಿ ದುಡಿಸಿಕೊಳ್ಳಲಾಯಿತು ಎಂದರು.

ಪ್ರತಿದಿನ ಬೆಳಿಗ್ಗೆ 6:00 ಗಂಟೆಯಿಂದ ಸಂಜೆ 6:30ರವರೆಗೆ ನಿರಂತರವಾಗಿ ಕೆಲಸ ಮಾಡಬೇಕಿತ್ತು. ಮಹಿಳೆಯರು ಕಬ್ಬು ಕತ್ತರಿಸಿ ಕಟ್ಟುಗಳನ್ನು ಕಟ್ಟಿಕೊಟ್ಟರೆ, ಪುರುಷರು ಅವುಗಳನ್ನು ಲಾರಿಗಳಿಗೆ ಲೋಡ್ ಮಾಡುತ್ತಿದ್ದರು. ಪ್ರತಿದಿನ ಮೂರು ಲೋಡ್ ಕಬ್ಬು ಕಳುಹಿಸಿದರೂ, ವಾರದ ಖರ್ಚಿಗೆ ಹಾಗೂ ಸಂತೆಗೆ ನೀಡುತ್ತಿದ್ದುದು ಕೇವಲ 800 ರಿಂದ 1,000 ಮಾತ್ರ. ಕಾಲುವೆ ನೀರನ್ನು ಸೋಸಿಕೊಂಡು ಕುಡಿಯುವಂತ ಸ್ಥಿತಿ ಇತ್ತು ಎಂದು ಹೇಳಿದರು.

ಮೂರು ಅಥವಾ ಆರು ತಿಂಗಳಿಗೊಮ್ಮೆ ಲೆಕ್ಕ ಹಾಕುವಾಗ ಮಾಲೀಕರು ಅತಿಯಾದ ಬಡ್ಡಿ ಸೇರಿಸಿ ಎಂದಿಗೂ ತೀರದ ಸಾಲದ ಲೆಕ್ಕ ತೋರಿಸುತ್ತಿದ್ದರು.ತಮಿಳುನಾಡು ಹಾಗೂ ಕರ್ನಾಟಕದ ಗಡಿ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾಗ, ಒಂದು ದಿನ ಅಧಿಕಾರಿಗಳು ಮತ್ತು ಜಂಟಿ ಪರಿಶೀಲನಾ ತಂಡವು ದಾಳಿ ನಡೆಸಿ ನಮ್ಮನ್ನು ಜೀತ ಪದ್ದತಿಯಿಂದ   ಬಿಡುಗಡಲಾಯಿತು ಎಂದರು.

ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ನೀಡಿದ ಬಿಡುಗಡೆ ಪತ್ರದ ಮೂಲಕ ಸುಮಾರು 150 ರಿಂದ 200 ಕಾರ್ಮಿಕರು ಮುಕ್ತಿ ಪಡೆದರು. ಬಿಡುಗಡೆಯಾದ ನಂತರ  ನಾನು ಉದಯೋನ್ಮುಖ  ಜೀತ ವಿಮುಕ್ತ  ಸಂಘದ ಕಾರ್ಯದರ್ಶಿಯಾಗಿ ಕೆಲಸ ಮಾಡುತಿದ್ದೇನೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ನಾಗರಾಜು ಆರ್ ಅವರು ಮಾತನಾಡಿ  ಜಿಲ್ಲಾ ಆಡಳಿತ ಮತ್ತು ಪೆÇಲೀಸ್/ಸರ್ಕಾರಿ ಇಲಾಖೆಗಳು ಒಂದೇ ಜೀತ ವಿಮುಕ್ತಿ ಹಾಗೂ ಮಾನವ ಸಾಗಾಣಿಕೆ ತಡೆ ಕಾರ್ಯಗಳನ್ನು ಸಂಪೂರ್ಣವಾಗಿ ಮಾಡಲು ಸಾಧ್ಯವಿಲ್ಲ. ಸರ್ಕಾರ ಮತ್ತು ಬಿಎಸ್‍ಒ/ಎನ್‍ಜಿಒ ನಾಣ್ಯದ ಎರಡು ಮುಖಗಳಿದ್ದಂತೆ ಒಂದಾಗಿ ಕೆಲಸ ಮಾಡಿದರೆ ಮಾತ್ರ ಪರಿಣಾಮಕಾರಿ ಫಲಿತಾಂಶ ಸಿಗುತ್ತದೆ. ಇತ್ತೀಚೆಗೆ ಟಿ. ನರಸೀಪುರ ತಾಲೂಕಿನ ಬೇವನಹಳ್ಳಿ ಭಾಗದಲ್ಲಿ ಜಿಲ್ಲಾಡಳಿತ, ಇಲಾಖೆ ಅಧಿಕಾರಿಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ಜಂಟಿಯಾಗಿ ಜೀತದಾಳುಗಳ ವಿಮೋಚನೆ ಮತ್ತು ಅರಿವು ಮೂಡಿಸುವ ಕೆಲಸ ಮಾಡಿದರು ಎಂದು ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಅಡಿಯಲ್ಲಿ, ಮಾನವೀಯತೆ ಮತ್ತು ಪ್ರೀತಿ-ವಿಶ್ವಾಸದಿಂದ ಕೆಲಸ ಮಾಡಿದಾಗ ಜೀತ ಪದ್ಧತಿ ಮತ್ತು ಮಾನವ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯ.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಆಡಳಿತವು ಇಂತಹ ಜನಪರ ಕೆಲಸಗಳಿಗೆ ಮತ್ತು ಸ್ವಯಂಸೇವಾ ಸಂಸ್ಥೆಗಳ ಜೊತೆಗೆ ಸಂಪೂರ್ಣವಾಗಿ ಬೆಂಬಲವಾಗಿ ನಿಲ್ಲುತ್ತದೆ ಎಂದರು.

ಕಾರ್ಯಕ್ರಮದಲ್ಲಿ  ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಯಾದ ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ, ವಕೀಲರ ಸಂಘದ ಅಧ್ಯಕ್ಷರಾದ ಲೋಕೇಶ ಎಸ್, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರವಿಚಂದ್ರ,  ಂಅP ರಾಜೇಂದ್ರ, ಪ್ರೈಸಿ, ವಿಜಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.