
ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.04: ಮನುಷ್ಯನ ಜ್ಞಾನ ವಿಕಾಸಕ್ಕೆ ಮಾತೃಭಾಷೆ ಸಹಕಾರಿ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಮಾಜಿ ಉಪನಿರ್ದೇಶಕರಾದ ಚೋರನೂರು ಟಿ ಕೊಟ್ರಪ್ಪ ಅಭಿಪ್ರಾಯಪಟ್ಟರು.
ಬಳ್ಳಾರಿ ಜಿಲ್ಲಾ ಕಸಾಪವು ಎಸ್.ಕೆ. ಮೋದಿ ನ್ಯಾಷನಲ್ ಸ್ಕೂಲ್ ನಲ್ಲಿ ಆಯೋಜಿಸಿದ್ದ ದಿ. ಚೋರನೂರು ಟಿ.ಕೆ. ಬಸವರಾಜ ಸ್ಮಾರಕ ದತ್ತಿ ಹಾಗೂ ದಿ ಜಾನೇಕುಂಟೆ ಸಿದ್ಧಬಸಪ್ಪ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಉಳಿಸಿ ಬೆಳೆಸುವ ಕಾರ್ಯ ನಿರಂತರ ಪ್ರಕ್ರಿಯೆಯಾಗಿದ್ದು ಕನ್ನಡಿಗರಾದ ನಾವು ಕನ್ನಡವನ್ನು ನಮ್ಮ ಜೀವನದ ಉಸಿರಾಗಿಸಿಕೊಳ್ಳಬೇಕು ಎಂದು ಚೋರನೂರು ಟಿ ಕೊಟ್ರಪ್ಪ ತಿಳಿಸಿದರು.
ಕಾರ್ಯಕ್ರಮದಲ್ಲಿ ದ.ರಾ. ಬೇಂದ್ರೆಯವರ ಕಾವ್ಯ ಕುರಿತು ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಡಾ. ಹೆಚ್.ಎಂ. ಉಮಾ ವಿಶೇಷ ಉಪನ್ಯಾಸ ನೀಡಿದರು.
ಇತ್ತೀಚೆಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿ ಪೂರ್ವ ಕಾಲೇಜಿನ ತರ್ಕಶಾಸ್ತ್ರ ಉಪನ್ಯಾಸಕ ಡಾ. ಸಂತೋಷ ಶಂ ಯಕ್ಕುಂಡಿ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಕೆ. ಮೋದಿ ನ್ಯಾಷನಲ್ ಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷ ಏಳುಬೆಂಚಿ ರಾಜಶೇಖರಗೌಡ ಮಾತನಾಡಿ ಗಡಿನಾಡು ಬಳ್ಳಾರಿಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಬೆಳೆಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಸಂಗತಿಯಾಗಿದೆ. ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ತಮ್ಮ ಶಾಲೆಯು ನಿರಂತರವಾಗಿ ಪ್ರೋತ್ಸಾಹ ನೀಡುವುದೆಂದು ತಿಳಿಸಿದರು.
ಶಾಲೆಯ ಆಡಳಿತ ಮಂಡಳಿ ಸದಸ್ಯ ವಸಂತಕುಮಾರ್ ಗೌಡ ಪಾಟೀಲ್, ಪ್ರಾಂಶುಪಾಲೆ ಶ್ರೀಮತಿ ಸುನಂದಾ ಎಂ ಪಾಟೀಲ್, ಚಿತ್ರ ಕಲಾವಿದ ಚೆನ್ನ ತೀರಾ, ಕಸಾಪ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕರಾದ ರಮೇಶ ಆರ್. ಕಾರ್ಯಕ್ರಮ ನಿರೂಪಿಸಿದರು. ಡಾ. ಬಸವರಾಜ ಗದಗಿನ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀಮತಿ ಜೀವನ ಸ್ವಾಗತಿಸಿದರು. ಶ್ರೀಮತಿ ಅಶ್ವಿನಿ ಕೆ.ಎಂ. ವಂದನಾರ್ಪಣೆ ಸಲ್ಲಿಸಿದರು.































