
ಮಂಗಳೂರು-ಹಬ್ಬದ ಸಂಭ್ರಮದ ನಡುವೆಯೂ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜು ಆಡಳಿತ ಮಂಡಳಿಯು ದಸರಾ ರಜೆ ಅವಧಿಯಲ್ಲೇ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸಿರುವುದಕ್ಕೆ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಸಂಘಟನೆಯು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪರೀಕ್ಷೆಯನ್ನು ಬಹಿಷ್ಕರಿಸಿ ಕಾಲೇಜಿನ ಗೇಟ್ ಎದುರು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ನಗರದ ಬೆಂದೂರ್‌ವೆಲ್ ಬಳಿ ಇರುವ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಇಂದಿನಿಂದ ಅಕ್ಟೋಬರ್ ೨೮ರವರೆಗೆ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದೆ. ಕರಾವಳಿಯ ಅತಿ ದೊಡ್ಡ ಸಾಂಪ್ರದಾಯಿಕ ಹಬ್ಬವಾದ ಮಂಗಳೂರು ದಸರಾ ಆಚರಣೆ ಹಾಗೂ ಸಂಭ್ರಮದಲ್ಲಿ ಭಾಗವಹಿಸಬೇಕಿದ್ದ ವಿದ್ಯಾರ್ಥಿಗಳಿಗೆ ಯಾವುದೇ ರಜೆ ನೀಡದೆ, ಇದೇ ಅವಧಿಯಲ್ಲಿ ಪರೀಕ್ಷೆ ನಡೆಸುತ್ತಿರುವುದು ವಿದ್ಯಾರ್ಥಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ದಸರಾ ಹಬ್ಬದ ರಜೆಗಳನ್ನು ಕಡಿತಗೊಳಿಸಿ ಏಕಾಏಕಿ ಪರೀಕ್ಷೆ ಘೋಷಿಸಿರುವುದು ವಿದ್ಯಾರ್ಥಿಗಳ ಹಬ್ಬದ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಗಿದೆ. ಪರೀಕ್ಷೆಗಳನ್ನು ಮುಂದೂಡುವಂತೆ ಮುಂಚಿತವಾಗಿ ಕಾಲೇಜು ಆಡಳಿತಕ್ಕೆ ಮನವಿ ಸಲ್ಲಿಸಿದ್ದರೂ, ಆಡಳಿತ ಮಂಡಳಿಯು ಸ್ಪಂದಿಸದೆ ಉದ್ದಟತನ ತೋರಿದೆ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ವಿದ್ಯಾರ್ಥಿಗಳ ಈ ನ್ಯಾಯಯುತ ಹೋರಾಟಕ್ಕೆ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಸಂಪೂರ್ಣ ಬೆಂಬಲ ಸೂಚಿಸಿದ್ದು, ಕಾಲೇಜಿನ ಮುಖ್ಯ ದ್ವಾರದ ಎದುರು ಜಮಾಯಿಸಿ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗಿದೆ. ಸದ್ಯ ಕಾಲೇಜಿನ ಗೇಟ್ ಎದುರು ಪ್ರತಿಭಟನೆ ಮುಂದುವರಿದಿದ್ದು, ಕೂಡಲೇ ಪರೀಕ್ಷೆಗಳನ್ನು ಮುಂದೂಡಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.
ಸೇಂಟ್ ಆಗ್ನೆಸ್ ಕಾಲೇಜು ಆಡಳಿತ ಮಂಡಳಿಯಿಂದ ಸ್ಪಷ್ಟನೆ
ದಸರಾ ಹಬ್ಬದ ಕಾರಣ ಪರೀಕ್ಷೆಯನ್ನು ಮುಂದೂಡಬೇಕೆಂದು ಒತ್ತಾಯಿಸಿ ಸೋಮವಾರ ವಿದ್ಯಾರ್ಥಿಗಳ ಒಂದು ವರ್ಗ ನಡೆಸಿದ ಪ್ರತಿಭಟನೆಯ ನಂತರ, ಸೇಂಟ್ ಆಗ್ನೆಸ್ ಕಾಲೇಜು (ಸ್ವಾಯತ್ತ) ಅಕ್ಟೋಬರ್ ೨೦೨೬ ರ ಅಂತಿಮ ಸೆಮಿಸ್ಟರ್ ಪರೀಕ್ಷಾ ವೇಳಾಪಟ್ಟಿಯ ಕುರಿತು ಸ್ಪಷ್ಟೀಕರಣವನ್ನು ನೀಡಿದೆ .
ಪತ್ರಿಕಾ ಪ್ರಕಟಣೆಯಲ್ಲಿ, ಕಾಲೇಜು ಆಡಳಿತ ಮಂಡಳಿಯುಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ಯಾವುದೇ ಸಾರ್ವಜನಿಕ ರಜಾದಿನಗಳಲ್ಲಿ ಪರೀಕ್ಷೆಗಳನ್ನು ನಿಗದಿಪಡಿಸಿಲ್ಲ. ಸೆಪ್ಟೆಂಬರ್ ೧೧ರಂದೇ ಕರಡು ವೇಳಾಪಟ್ಟಿ ಪ್ರಕಟಿಸಿ ಆಕ್ಷೇಪಣೆಗೆ ೧೫ ದಿನಗಳ ಕಾಲಾವಕಾಶ ನೀಡಲಾಗಿದ್ದರೂ, ವಿದ್ಯಾರ್ಥಿಗಳಿಂದ ಯಾವುದೇ ಮನವಿ ಸಲ್ಲಿಕೆಯಾಗಿರಲಿಲ್ಲ. ಬಳಿಕ ಸೆಪ್ಟೆಂಬರ್ ೨೬ರಂದು ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಆದರೆ ವಿದ್ಯಾರ್ಥಿಗಳ ಕಳವಳಗಳನ್ನು ಪರಿಗಣಿಸಿ ಮತ್ತು ಶೈಕ್ಷಣಿಕ ವಾತಾವರಣವನ್ನು ಕಾಪಾಡುವ ದೃಷ್ಟಿಯಿಂದ ಅಕ್ಟೋಬರ್ ೧೯ ಹಾಗೂ ೨೨ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಕಾಲೇಜು ತಿಳಿಸಿದೆ.
ಮರುನಿಗದಿಪಡಿಸಿದ ದಿನಾಂಕಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಈ ಪ್ರತಿಭಟನೆಯಲ್ಲಿ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಿದ್ದರೂ, ಕಾಲೇಜು ಆಡಳಿತವು ಅವರ ಕಳವಳಗಳಿಗೆ ಸಂವಾದ, ಪರಸ್ಪರ ತಿಳುವಳಿಕೆ ಹಾಗೂ ಸದ್ಭಾವನೆಯ ಮನೋಭಾವದಿಂದ ಸ್ಪಂದಿಸಿದೆ.
ಅಶಿಸ್ತು ಅಥವಾ ಕ್ಯಾಂಪಸ್ ಶಾಂತಿಗೆ ಭಂಗ ತರುವ ಯಾವುದೇ ಘಟನೆಗಳನ್ನು ಸಾಂಸ್ಥಿಕ ನಿಯಮಗಳ ಪ್ರಕಾರ ಕಟ್ಟುನಿಟ್ಟಾಗಿ ಎದುರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ . ಇದೇ ವೇಳೆ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಬೆಂಬಲ ನೀಡಿದ್ದಕ್ಕಾಗಿ ಪ್ರಾಂಶುಪಾಲರು ಜಿಲ್ಲಾಧಿಕಾರಿ, ಪೊಲೀಸ್ ಸಿಬ್ಬಂದಿ ಮತ್ತು ಪೋಷಕರ ಸಂಘಕ್ಕೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು .


























