
ಪುತ್ತೂರು; ಪುತ್ತೂರು ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೀಪಾವಳಿಯ ಶುಭ ಸಂದರ್ಭದಲ್ಲಿ ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನ. ೮ರಂದು ನಡೆಯಲಿರುವ ವಸ್ತ್ರ ವಿತರಣೆ ಹಾಗೂ ಟ್ರಸ್ಟ್ ಫಲಾನುಭವಿಗಳ ವಾರ್ಷಿಕ ಸಮಾವೇಶ ಅಶೋಕ ಜನ-ಮನ ಸಮಾರಂಭಕ್ಕೆ ಸೋಮವಾರ ಚಪ್ಪರ ಮುಹೂರ್ತ ಕಾರ್ಯಕ್ರಮ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯಿತು.
ಚಪ್ಪರ ಮುಹೂರ್ತ ನೆರವೇರಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಈ ಬಾರಿ ೧೪ನೇ ವರ್ಷದ ಅಶೋಕ ಜನಮನ ಕಾರ್ಯಕ್ರಮ ನಡೆಯುತ್ತಿದ್ದು, ಕಳೆದ ವರ್ಷ ಹೆಚ್ಚಿನ ಮಳೆ ಬಂದು ಕೊಂಚ ವ್ಯತ್ಯಾಸಗಳಾಗಿತ್ತು. ಹೀಗಾಗಿ ಈ ಬಾರಿ ಕ್ರೀಡಾಂಗಣದಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿ ಶೀಟ್ ಅಳವಡಿಸಲಿದ್ದೇವೆ. ಗೊಂದಲ ಆಗದಂತೆ ಬೆಳಗ್ಗೆ ೯.೩೦ಕ್ಕೆ ವಿತರಣಾ ಕಾರ್ಯ ಆರಂಭಗೊಳ್ಳಲಿದ್ದು, ಮೂರು ಕೌಂಟರ್ ಗಳಲ್ಲಿ ಪ್ರತ್ಯೇಕವಾಗಿ ಬಟ್ಟಲು-ತಟ್ಟೆ, ಮಹಿಳೆಯರಿಗೆ ಗುಣಮಟ್ಟದ ಸೀರೆ, ಬೆಡ್ ಶೀಟ್ ಗಳನ್ನು ವಿತರಿಸಲಿದ್ದೇವೆ. ಒಂದು ಮನೆಯಿಂದ ಎಷ್ಟು ಮಂದಿ ಕೂಡ ಭಾಗವಹಿಸಬಹುದಾಗಿದ್ದು, ಒಬ್ಬರು ಒಮ್ಮೆ ಮಾತ್ರ ತೆಗೆದುಕೊಳ್ಳಬೇಕು. ಪುತ್ತೂರು ಕ್ಷೇತ್ರದ ಪ್ರತಿ ಮನೆಗಳಿಗೂ ಆಮಂತ್ರಣ ತಲುಪಲಿದ್ದು, ಇದಕ್ಕಾಗಿ ಪ್ರತಿಯೊಂದೆಡೆ ಸಭೆಗಳು ಈಗಾಗಲೇ ಆರಂಭಗೊಂಡಿದೆ. ಜತೆಗೆ ಉಡುಪಿ, ದ.ಕ.ಜಿಲ್ಲೆಯ ಬೇರೆ ಬೇರೆ ಭಾಗದ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಸುಮಾರು ೭೦ ಸಾವಿರ ಮಂದಿಗೆ ದೋಸೆ ವ್ಯವಸ್ಥೆ, ಬೆಳಗ್ಗಿನಿಂದ ಉಪಹಾರ ಆರಂಭಗೊಂಡು, ಮಧ್ಯಾಹ್ನ ಊಟದ ವ್ಯವಸ್ಥೆ, ಸಂಜೆ ೩ರ ಬಳಿಕ ದೋಸೆ ಮೇಳ ಇರುತ್ತದೆ. ಸಮಾರಂಭಕ್ಕೆ ಸಿಎಂ ಅವರನ್ನು ಕರೆಸುವ ಯೋಚನೆ ಇದ್ದು, ಅಂತಿಮಗೊಂಡಿಲ್ಲ. ರಾಜ್ಯದ ವಿವಿಧ ಸಚಿವರು, ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇದು ಬರೀ ಪ್ರೀತಿ-ವಿಶ್ವಾಸದ ಕಾರ್ಯಕ್ರಮವಾಗಿದೆ ಎಂದರು.
ಸಮಾರಂಭದಲ್ಲಿ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಸುಮಾ ಎ.ರೈ, ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪ್ರಮುಖರಾದ ಹೇಮನಾಥ ಶೆಟ್ಟಿ ಕಾವು, ಕೃಷ್ಣಪ್ರಸಾದ್ ಆಳ್ವ, ಪದ್ಮನಾಭ ಪೂಜಾರಿ, ಉಮಾನಾಥ ಶೆಟ್ಟಿ ಪೆರ್ನೆ, ಜೋಕಿಂ ಡಿಸೋಜ, ಮಹಮ್ಮದ್ ಬಡಗನ್ನೂರು, ಎನ್.ಚಂದ್ರಹಾಸ ಶೆಟ್ಟಿ, ಸುಜಾತ ಪಿ.ಶೆಟ್ಟಿ, ನಿಹಾಲ್ ಪಿ.ಶೆಟ್ಟಿ ಮೊದಲಾದವರಿದ್ದರು.


























