
ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.17: ಆಗಸ್ಟ್ 15ರಂದು ಬಳ್ಳಾರಿ ನಗರದ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಸಿಎ ಪುರುಷೋತ್ತಮರೆಡ್ಡಿ ಕೆ ಅವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಭಾರತ ದೇಶ ಅಭಿವೃದ್ಧಿಯಾಗಬೇಕಾದರೆ ಯುವಕರಲ್ಲಿ ದೇಶಭಕ್ತಿಯ ಭಾವನೆ ಬೆಳೆಸುವುದು ಅತ್ಯಂತ ಅಗತ್ಯ. ಇಂದಿನ ಯುವಕರೇ ದೇಶದ ನಿಜವಾದ ಆಸ್ತಿ” ಎಂದು ಹೇಳಿದರು.
ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವ ಭಾರತದಲ್ಲಿ ಕೆಲ ದುಷ್ಟ ಶಕ್ತಿಗಳು ದೇಶವಿರೋಧಿ ಚಟುವಟಿಕೆಗಳಿಗೆ ಯುವಕರನ್ನು ಪ್ರಚೋದಿಸಿ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿವೆ. ಪ್ರತಿಭಟನೆಯ ನೆಪದಲ್ಲಿ ದೇಶದ ಶ್ರದ್ಧಾ ಕೇಂದ್ರಗಳನ್ನು ಟೀಕಿಸುವುದು ಹಾಗೂ ಅತ್ಯುನ್ನತ ಹುದ್ದೆಯಲ್ಲಿರುವ ಗೌರವಾನ್ವಿತ ವ್ಯಕ್ತಿಗಳ ಬಗ್ಗೆ ವೈಯಕ್ತಿಕ ನಿಂದನೆ ಮಾಡುವುದು ಸೂಕ್ತವಲ್ಲ. ಪ್ರತಿಭಟನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದ್ದರೂ, ಯಾವುದೇ ಸಂದರ್ಭದಲ್ಲೂ ಕಾನೂನನ್ನು ಕೈಗೆತ್ತಿಕೊಳ್ಳುವ ಪ್ರಯತ್ನ ಮಾಡಬಾರದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಸಿಎ ಸ್ವಪ್ನ ಪ್ರಿಯ, ಕಾರ್ಯದರ್ಶಿಗಳಾದ ಸಿಎ ಶರಣ್ ಪಾಟೀಲ್, ಖಜಾಂಚಿಗಳಾದ ಸಿಎ ವಿಶ್ವನಾಥ್ ಆಚಾರಿ, ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಸಿಎ ಹನುಮಂತರೆಡ್ಡಿ, ಸಂಸ್ಥೆಯ ಮಾಜಿ ಅಧ್ಯಕ್ಷರಾದ ಸಿಎ ಗಜರಾಜ್ ಡಿ, ಸಿಎ ವೆಂಕಟೇಶ್ ಗುಂಡ ಹಾಗೂ ಸಿಎ ಜಿತೇಂದ್ರ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರುಗಳು, ಸದಸ್ಯರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇಶಭಕ್ತಿ ಮತ್ತು ರಾಷ್ಟ್ರಾಭಿಮಾನವನ್ನು ಮೆರೆದರು.






























