
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.06: ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆ ಭದ್ರವಾಗಿರುವುದೇ ಶಿಕ್ಷಕರಿಂದ ಆದ್ದರಿಂದ ಶಿಕ್ಷಕರು ಮೌಲ್ಯಗಳನ್ನ ಉಳಿಸಿಕೊಂಡು ಶ್ರದ್ದೆ, ಆಸಕ್ತಿಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ನಿಶ್ಚಲಾನಂದ ಶ್ರೀಗಳು ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರನ್ನು ಅಭಿನಂದಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಸರ್ಕಾರಿ ಶಾಲೆಗಳಿಗೆ ಬರುವ ಅನಕ್ಷರಸ್ಥ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಲು ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕು. ಖಾಸಗೀ ಶಾಲೆಗಳ ವ್ಯಾಮೋಹಕ್ಕೆ ಒಳಗಾಗದೇ ಸರ್ಕಾರಿ ಶಾಲೆಯಲ್ಲಿಯೇ ಗುಣಾತ್ಮಕ ಶಿಕ್ಷಣ ಸಿಕ್ಕಿದರೆ ಅವರುಗಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ.
ಸರ್ಕಾರಿ ಶಾಲೆಗಳಲ್ಲಿ ಭಾಷಾ ಪ್ರೌಢಿಮೆಯನ್ನು ಹೆಚ್ಚಿಸುವ ಕೆಲಸ ಮಾಡಬೇಕು. ಸ್ವಾತಂತ್ರ ಬಂದಾಗ ಇಂಜಿನಿಯರ್ ವೈದ್ಯರು ರಾಜಕೀಯ ಮುಖಂಡರು ದೇಶವನ್ನು ಮುನ್ನೆಡೆಸುತ್ತಾರೆ ಎಂಬ ಭಾವನೆಯಿತ್ತು. ಆದರೆ ಇಂದು ಇಂಜಿನಿಯರ್.
ವೈದ್ಯರು ರಾಜಕಾರಣಿಗಳು ಎಲ್ಲರನ್ನೂ ನಿರ್ಮಾಣ ಮಾಡುವವರು ಶಿಕ್ಷಕರೇ ಎಂಬ ಅರಿವು ಬಂದಿದೆ. ಮಂಡ್ಯ ಜಿಲ್ಲೆಯ ಫಲಿತಾಂಶ ಹಿಂದೆ ಕೆಳಗಿನಿಂದ ನೋಡಬೇಕಿತ್ತು. ಆದರೆ ಇಂದು ಸರ್ಕಾರಿ ಶಾಲೆಗಳ ಶಿಕ್ಷಕರು ಶ್ರಮಿಸುತ್ತಿರುವ ಪರಿಣಾಮ ಮಂಡ್ಯ ಜಿಲ್ಲೆ ಫಲಿತಾಂಶವನ್ನು ಮೇಲಿನಿಂದ ನೋಡಬಹುದಾಗಿದೆ ಎಂದು ತಿಳಿಸಿದರು.
ಸಮಾರಂಭದ ಆಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಬಾಲ್ಯದಿಂದಲೂ ಇಲ್ಲಿಯವರೆಗೆ ಅಕ್ಷರ ತಿಳುವಳಿಕೆ ನೀಡಿ ಮಾನವೀಯತೆ ಮೆರೆದ ಸಮಸ್ತ ಶಿಕ್ಷಕ ವರ್ಗವನ್ನು ಸ್ಮರಿಸುವ ಮಹತ್ವದ ದಿನವಾಗಿದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರಾಗಿ ಭಾರತದ ರಾಷ್ಟ್ರಪತಿಯಂಥಹ ಮಹತ್ವದ ಹುದ್ದೆಗೆ ಏರಿದ ಮಹತ್ವದ ದಿನವೇ ಶಿಕ್ಷಕರ ದಿನಾಚರಣೆ. ತಾಲ್ಲೂಕಿನಲ್ಲಿ ಶಿಕ್ಷಣ ವ್ಯವಸ್ಥೆ ಸಾಕಷ್ಟು ಸುಧಾರಿಸಿದೆ. ಡಾ.ನಿಶ್ಚಲಾನಂದ ಮಹಾಸ್ವಾಮಿಗಳು ಆಗ ಆರಂಭಿಸಿದ ಶತಮಾನದ ಶಾಲೆ ಇಂದು ಕೆಪಿಎಸ್ ಶಾಲೆಯಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ. ಎರಡು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಹೀಗಿದ್ದರೂ ಕೆಲವರು ಕೆಪಿಎಸ್ ಶಾಲೆಯ ಬಗ್ಗೆ ಅಪಪ್ರಚಾರ ಮಾಡಿದ್ದು ಶಿಕ್ಷಣದ ಬಗ್ಗೆ ಆಸಕ್ತಿ ವಹಿಸಿ ಕೆಲಸ ಮಾಡುತ್ತಿರುವ ಮನೋಸ್ಥಿತಿಯವರಿಗೆ ಇಂಥಹ ಘಟನೆಗಳು ಬೇಸರ ತರಿಸುತ್ತವೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಗೊಳಿಸಲು ನಾನು ನಡೆಸುತ್ತಿದ್ದ ಶಾಲೆಯನ್ನೇ ಮುಚ್ಚಿ ನಮ್ಮೂರಿನ ಶಾಲೆಯನ್ನು ಉತ್ತಮವಾಗಿ ಅಭಿವೃದ್ದಿಪಡಿಸಲಾಗಿದೆ. ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳ ಶಿಕ್ಷಕರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶ್ರಮವಹಿಸಿ ಉತ್ತಮ ಫಲಿತಾಂಶಕ್ಕೆ ಕಾರಣಕರ್ತರಾಗಿದ್ದಾರೆ. ಅದಕ್ಕಾಗಿ ತಾಲ್ಲೂಕಿನ ಎಲ್ಲಾ ಶಿಕ್ಷಕ ಸಮೂಹವನ್ನು ಅಭಿನಂದಿಸುತ್ತೇನೆ. ಶಾಸಕರಾಗಿ ಕೇವಲ ರಸ್ತೆ ಚರಂಡಿ. ಕುಡಿಯುವ ನೀರು ಒದಗಿಸಿದರೆ ಸಾಲದು ದೂರದೃಷ್ಟಿ ಮತ್ತು ಸಮಾಜಮುಖಿಯಾಗಿ ಯೋಚಿಸಿದಾಗ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಶ್ರಮಿಸಿದ್ದೇನೆ. ಸಾದ್ಯವಾದಷ್ಟು ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ನೋಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಶಿಕ್ಷಕರು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಶ್ರಮಿಸಬೇಕು. ಆ ಮೂಲಕ. ಉತ್ತಮ ಸಮಾಜದ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು. ಇದೇ ಸಂದರ್ಭದಲ್ಲಿ. 2026-27 ನೇ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಕೈಮಗ್ಗ ನಿಗಮದ ಅದ್ಯಕ್ಷ ನಾಗೇಂದ್ರಕುಮಾರ್. ತಾಪಂ ಇಓ ಸುಷ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮೇಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಹೆಚ್.ಕೆ.ಮಂಜುನಾಥ್, ಪಿಎಂ ಪೆÇೀಷಣ್ ಅಭಿಯಾನ್ ಸಹಾಯಕ ನಿರ್ದೇಶಕ ಸಿ.ಎನ್.ಯತೀಶ್, ತಾಲ್ಲೂಕು ಸರ್ಕಾರಿ ನೌಕರರ ಸಂಘಧ ಆಧ್ಯಕ್ಷ ಆನಂದ್‍ಕುಮಾರ್, ಕಾರ್ಯದರ್ಶಿ ಧರ್ಮಪ್ಪ, ಉಪನ್ಯಾಸಕರ ಸಂಘದ ಅಧ್ಯಕ್ಷ. ಮಂಜುನಾಥ್. ಕಾರ್ಯದರ್ಶಿ ವೆಂಕಟೇಗೌಡ. ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘಧ ಆದ್ಯಕ್ಷ ಪುಟ್ಟರಾಜು. ಕಾರ್ಯದರ್ಶಿ ಮಹೇಶ್. ಪ್ರೌಢಶಾಲಾ ಸಹಶಿಕ್ಷಕರ ಸಂಘಧ ಆದ್ಯಕ್ಷ ಎಸ್.ಎಂ.ಬಸವರಾಜು, ಸೇರಿದಂತೆ ತಾಲ್ಲೂಕಿನ ಎಲ್ಲಾ ಶಾಲೆಗಳ ಸಾವಿರಾರು ಶಿಕ್ಷಕರು ಹಾಜರಿದ್ದರು.


























