
ಸಂಜೆವಾಣಿ ವಾರ್ತೆ
ಹನೂರು.ಸೆ.9:- ಇಂದಿನ ಕಾಲದಲ್ಲಿ ಸಣ್ಣಪುಟ್ಟ ಕಾಮಗಾರಿಗೂ ಸರ್ಕಾರದ ಅನುದಾನಕ್ಕಾಗಿ ಕಾಯುವ ಜನರು , ಅನುದಾನ ಬಂದರೆ ಮಾತ್ರ ಕೆಲಸ ಮಾಡುವ ಪ್ರವೃತ್ತಿ ಹೆಚ್ಚಾಗಿರುವಾಗ , ಕಾಮಗೆರೆ ಗ್ರಾಮದ ರೈತರೊಬ್ಬರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದ ನಿಸ್ವಾರ್ಥ ಸೇವೆಯ ರೈತ ನಾಗೇಂದ್ರ ಅವರ ಕಾಯಕ ಎಲ್ಲರಿಗೂ ಮಾದರಿಯಾಗಿದೆ.
ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದ ಕಬಿನಿ ಬಲದಂಡೆ ನಾಲೆಯ ಪಕ್ಕದಲ್ಲಿ ಹಾದು ಹೋಗುವ ಕೋಡಿಹಳ್ಳ ರಸ್ತೆಯ ಮಾರ್ಗವಾಗಿ ಮಧ್ಯೆ ಇರುವ ಹಳ್ಳವು ರೈತರಿಗೆ ದೊಡ್ಡ ತೊಡಕಾಗಿತ್ತು. ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುತ್ತಿದ್ದರಿಂದ ಅಕ್ಕಪಕ್ಕದ ಜಮೀನುಗಳಿಗೆ ಟ್ರ್ಯಾಕ್ಟರ್, ಎತ್ತಿನಗಾಡಿ ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನಗಳು ಹೋಗಲು ಸಾಧ್ಯವಾಗುತ್ತಿರಲಿಲ್ಲ.
ಈ ಭಾಗದ ರೈತರ ಈ ಸಂಕಷ್ಟವನ್ನು ಮನಗಂಡ ಪ್ರಗತಿಪರ ರೈತ ಡಿ.ಕೆ. ನಾಗೇಂದ್ರ ಬಿನ್ ಲೇಟ್ ದೊಡ್ಡಕೆಂಪಣ್ಣ ಅವರು ಯಾರ ಸಹಾಯಕ್ಕೂ ಕಾಯದೆ, ಸರ್ಕಾರದ ಹಣಕ್ಕೆ ಕಾಯದೆ ತಮ್ಮ ಸ್ವಂತ ಖರ್ಚಿನಿಂದಲೇ ಸುಮಾರು 1 ಲಕ್ಷಕ್ಕೂ ಹೆಚ್ಚು ರೂ. ವೆಚ್ಚದಲ್ಲಿ ಸುಸಜ್ಜಿತ (ಸೆಲ್ವರಾಜ್ ಜಮೀನ ಹತ್ತಿರ) ಕಿರು ಸೇತುವೆಯನ್ನು ಮಾರ್ಚ್ 2026 ರಲ್ಲಿ ನಿರ್ಮಿಸಿ ಕೊಟ್ಟಿದ್ದಾರೆ.
ಯಾವುದೇ ಪ್ರಚಾರದ ಗೀಳಿಲ್ಲದೆ, ಕೇವಲ ರೈತರ ಅನುಕೂಲಕ್ಕಾಗಿ ಅವರು ಮಾಡಿದ ಈ ಕೆಲಸಕ್ಕೆ ಇಡೀ ಗ್ರಾಮವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಹಣವಿದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವ ಈ ಕಾಲದಲ್ಲಿ, ಇರುವ ಹಣವನ್ನು ಸಮಾಜದ ಒಳಿತಿಗಾಗಿ ಬಳಸಿದ ರೈತ ನಾಗೇಂದ್ರ ಅವರ ಕುಟುಂಬದ ಈ ಕಾರ್ಯ ನಿಜಕ್ಕೂ ಇತರರಿಗೆ ಮಾದರಿ ಮತ್ತು ಸ್ಪೂರ್ತಿದಾಯಕವಾಗಿದೆ ಎಂದು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


























