
ಸಂಜೆವಾಣಿ ವಾರ್ತೆ
ಮಂಡ್ಯ:ಸೆ.13: ಕೊತ್ತತ್ತಿ ಹೋಬಳಿಯಲ್ಲಿ ಹಲವು ವರ್ಷಗಳಿಂದ ಕೃಷಿ ಮಾಡಿ ಕೊಂಡು ಜೀವನ ನಡೆಸು ತ್ತಿರುವ ರೈತ ಕುಟುಂಬಗಳ ಜಮೀನು ವ್ಯಾಜ್ಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಮರ್ಪಕ ವಾಗಿ ಕಾರ್ಯನಿರ್ವಹಿಸ ಬೇಕು ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರು ಸೂಚಿಸಿದರು.
ತಾಲ್ಲೂಕಿನ ಕೊತ್ತತ್ತಿ-1ನೇ ಹೋಬಳಿಯ ಕೊತ್ತತ್ತಿ ಗ್ರಾಮದ ಶ್ರೀ ವಿದ್ಯಾಗಣಪತಿ ಪ್ರೌಢಶಾಲಾ ಆವರಣದಲ್ಲಿ ನಡೆದ ಪ್ರಜಾ ಸೇವೆ ಆಂದೋಲನ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊತ್ತತ್ತಿ ಹೋಬಳಿಯಲ್ಲಿ 1960ಕ್ಕೂ ಹಿಂದಿನಿಂದಲೂ ಕೆಲವು ಕುಟುಂಬಗಳು ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದು, ಕೆಲವರ ಬಳಿ ಅಗತ್ಯ ದಾಖಲೆಗಳಿವೆ.ಇನ್ನು ಕೆಲವು ಕುಟುಂಬಗಳ ಬಳಿ ದಾಖಲೆಗಳ ಕೊರತೆಯಿರು ವುದರಿಂದ ಜಮೀನು ಸಂಬಂಧಿತ ವ್ಯಾಜ್ಯಗಳು ಉಂಟಾಗಿವೆ.ಈ ಹಿನ್ನೆಲೆಯಲ್ಲಿ ಕಂದಾಯ ದಾಖಲೆಗಳನ್ನು ಪರಿಶೀಲಿಸಿ, ಅರ್ಹ ರೈತ ಕುಟುಂಬಗಳಿಗೆ ನ್ಯಾಯ ಒದಗಿಸುವ ನಿಟ್ಟಿ ನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಕಂದಾಯ ಇಲಾಖೆಯ ಹಲವು ದಾಖಲೆಗಳನ್ನು ಡಿಜಿಟಲೀಕರಣಗೊಳಿಸ
ಲಾಗಿದ್ದು, ದಾಖಲೆಗಳಲ್ಲಿ ಫಲಾನುಭವಿಗಳ ಹೆಸರು ಗಳು ಲಭ್ಯವಿದ್ದಲ್ಲಿ ನಿಯಮಾನುಸಾರ ಒನ್ ಟು ಫೈಲ್ ಮಾಡಿ, ಅರ್ಹರಿಗೆ ಅಗತ್ಯ ದಾಖಲೆಗಳನ್ನು ಒದಗಿಸಲು ಕ್ರಮ ಕೈಗೊಳ್ಳ ಬೇಕು ಎಂದು ಅಧಿಕಾರಿ ಗಳಿಗೆ ಮನವಿ ಮಾಡಿದರು.
ಕೊತ್ತತ್ತಿ ಹೋಬಳಿಯ ಜನರ ಸಮಸ್ಯೆಗಳನ್ನು ಸ್ಥಳ ದಲ್ಲಿಯೇ ಆಲಿಸಿ, ನಿಗದಿತ ಅವಧಿಯೊಳಗೆ ಪರಿಹರಿ ಸುವ ಉದ್ದೇಶದಿಂದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡಂತೆ ಪ್ರಜಾ ಸೇವೆ ಆಂದೋಲನ ಆಯೋಜಿಸ ಲಾಗಿದೆ.ಅರ್ಹ ಫಲಾನುಭವಿ ಗಳಿಗೆ ಇ-ಪೌತಿ ಖಾತೆ, ಹಕ್ಕುಪತ್ರ ಹಾಗೂ ದುರಸ್ತಿ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸರ್ಕಾರದ ವಿವಿಧ ಕಾರ್ಯಕ್ರಮಗಳು ಮತ್ತು ಇಲಾಖಾ ಕಾರ್ಯಗಳ ಒತ್ತಡ ಅಧಿಕಾರಿಗಳಿಗೆ ಇರುವುದನ್ನು ಅರ್ಥಮಾಡಿಕೊಳ್ಳುತ್ತೇವೆ. ಆದರೆ ಜಮೀನು ವಿಚಾರವು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನಕ್ಕೆ ನೇರವಾಗಿ ಸಂಬಂಧಿಸಿದೆ. ಹೋಬಳಿಯಲ್ಲಿ 800ಕ್ಕೂ ಹೆಚ್ಚು ಕುಟುಂಬಗಳು ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದು, ವ್ಯಾಜ್ಯಗಳ ಹಿನ್ನೆಲೆ ಮತ್ತು ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಅರ್ಹರಿಗೆ ಭೂಮಿಯ ಹಕ್ಕು ದೊರಕು ವಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಕೃಷಿಗೆ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ
ರೈತರಿಗೆ ವಿದ್ಯುತ್ ಸಮಸ್ಯೆ ಯಾಗದಂತೆ ಕೃಷಿ ಚಟು ವಟಿಕೆಗಳಿಗೆ ನಿರಂತರ ವಿದ್ಯುತ್ ಪೂರೈಕೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದೆ.3,000 ಮೆಗಾವ್ಯಾಟ್ ಸಾಮಥ್ರ್ಯದ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ರೈತರ ಕೃಷಿ ಕಾರ್ಯಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ವಿಶ್ವನಾಥ್, ಇಒ ಲೋಕೇಶ್ ಮೂರ್ತಿ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


























