Home ಜಿಲ್ಲೆ ಮೈಸೂರು ಕಸಾಪ ಜಿಲ್ಲಾ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅವರಿಗೆ ಶ್ರದ್ಧಾಂಜಲಿ

ಕಸಾಪ ಜಿಲ್ಲಾ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅವರಿಗೆ ಶ್ರದ್ಧಾಂಜಲಿ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಸೆ.09:-
ಮನುಷ್ಯನಿಗೆ ಸಾವು ನಿಶ್ಚಿತ, ದೇಹ ನಶ್ವರ. ಆದರೆ ಆತ ಬದುಕಿದ್ದಾಗ ತೋರಿಸಿದ ಪ್ರೀತಿ, ಕರುಣೆ, ಪ್ರಾಮಾಣಿಕತೆ ಮತ್ತು ಆತನ ಸತ್ಕಾರ್ಯಗಳು ಆತನ ಮರಣದ ನಂತರವೂ ಜನರ ಮನಸ್ಸಿನಲ್ಲಿ ಜೀವಂತವಾಗಿ ಉಳಿಯುತ್ತಿವೆ ಎಂದರೆ ಅದಕ್ಕೆ ಸಾಕ್ಷಿ ಸಾಹಿತಿ ಮಡ್ಡಿಕೆರೆ ಗೋಪಾಲ್ ಎಂದು ತಾಲೂಕು ಯುವ ರೈತ ವೇದಿಕೆ ಅಧ್ಯಕ್ಷ ಅರ್ಜುನಹಳ್ಳಿ ರಾಮ್ ಪ್ರಸಾದ್ ಸ್ಮರಿಸಿದರು.


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಡ್ಡಿಕೆರೆ ಗೋಪಾಲ್ ಅಭಿಮಾನಿಗಳು ಹಾಗೂ ಸಾಹಿತಿಗಳು ಇತ್ತೀಚಿಗೆ ನಿಧನರಾದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅವರಿಗೆ ಅಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು
ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು ಹಾಗಾಗಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಿರಿ ಪದವಿ ಎಂದು ಭಾವಿಸದೆ ಸೇವೆ ಎಂದು ಪರಿಗಣಿಸಿಕೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಮಾಡಿದವರು, ಎಷ್ಟೋ ಮಂದಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹೋಗಿದ್ದಾರೆ ಆದರೆ ಇವರಂತೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಕಡಿಮೆ ಎಂದರು.
ವಕೀಲ ವೃತ್ತಿಯಲ್ಲಿದ್ದರೂ ಕನ್ನಡದ ಕೈಂಕರ್ಯವನ್ನು ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಿದ್ದ ಅವರು ಹಲವು ಕನ್ನಡ ಸಂಘಟನೆಗಳನ್ನು ಕಟ್ಟಿಬೆಳೆಸಿದ್ದಾರೆ. ಶಾಲೆಗಳನ್ನು ದತ್ತು ಸ್ವೀಕರಿಸುವುದು, ಕನ್ನಡಪರ ಕಾರ್ಯಕ್ರಮಗಳನ್ನು ಸಂಘಟಿಸುವುದು, ಅಂತರ್ಜಾತಿ ವಿವಾಹಗಳಿಗೆ ಪೆÇ್ರೀತ್ಸಾಹ ನೀಡುವುದು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದರು ಎಂದು ಹೇಳಿದರು.


ಬಳಿಕ ಸಾಹಿತಿಗಳಾದ ಹೆಗ್ಗಂದೂರು ಪ್ರಭಾಕರ್, ತಿಪ್ಪೂರು ಕೃಷ್ಣ ಮಾತನಾಡಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸಿದ ಮಡ್ಡಿಕೆರೆ ಗೋಪಾಲ್ ಅವರ ನಿಷ್ಠಾವಂತ ಒಡನಾಟ ಹಾಗೂ ದಿಟ್ಟ ವ್ಯಕ್ತಿತ್ವವನ್ನು ಸಭೆಯಲ್ಲಿ ಕೃತಜ್ಞತೆಯಿಂದ ನೆನೆದರು. ತದನಂತರ ಇಹಲೋಕ ತ್ಯಜಿಸಿದ ಮಡ್ಡಿಕೆರೆ ಗೋಪಾಲ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಾಹಿತಿಗಳು ಹಾಗೂ ಗಣ್ಯರು ಪ್ರಾರ್ಥಿಸಿದರು.
ಸಾಹಿತಿ ಕೊಡಿಯಾಲ ಶಿವಕುಮಾರ್, ರೈತ ಮುಖಂಡ ಗರುಡಗಂಭ ಸ್ವಾಮಿ, ರಾಮಚಂದ್ರೇಗೌಡ, ಬಿ.ಎಸ್.ಎನ್.ಎಲ್.ಕೃಷ್ಣ ಸೇರಿದಂತೆ ಅನೇಕ ಸಾಹಿತಿಗಳು, ಗಣ್ಯರು ಹಾಜರಿದ್ದರು.