
‘ಗ್ರಾಮಾಯಣ’ ಹಾಡಿಗೆ ಭರ್ಜರಿ ಪ್ರತಿಕ್ರಿಯೆ
ಜುಲೈ 3ರಂದು ತೆರೆಗೆ ಬರಲಿರುವ ವಿನಯ್ ರಾಜ್‌ಕುಮಾರ್ ಅಭಿನಯದ “ಗ್ರಾಮಾಯಣ” ಚಿತ್ರದ ಹೊಸ ಹಾಡು “ಏನೇ ಹೇಳು ಕುಸುಮ” ಪ್ರೇಕ್ಷಕರ ಮನಗೆದ್ದಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಲಹರಿ ಫಿಲಂಸ್ ನಿರ್ಮಾಣದ ಈ ಚಿತ್ರವನ್ನು ದೇವನೂರು ಚಂದ್ರು ನಿರ್ದೇಶಿಸಿದ್ದು, ವಿನಯ್ ರಾಜ್‌ಕುಮಾರ್ ಹಾಗೂ ಮೇಘ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ ಈ ಮಧುರ ಗೀತೆಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದು, ನಿಹಾಲ್ ತವ್ರೊ ಹಾಗೂ ಸಾಕ್ಷಿ ಕಲ್ಲೂರ್ ಧ್ವನಿಯಾಗಿದ್ದಾರೆ.
ಹಾಡು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ಮಾಪಕ ಲಹರಿ ವೇಲು, “ಗ್ರಾಮಾಯಣ ನಮ್ಮ ಸಂಸ್ಥೆಯ ಒಂಬತ್ತನೇ ಚಿತ್ರ. ಗ್ರಾಮೀಣ ಸೊಗಡಿನ ಈ ಚಿತ್ರ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಜುಲೈ 3ರಂದು ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ” ಎಂದರು.
ನಿರ್ದೇಶಕ ದೇವನೂರು ಚಂದ್ರು, “ಗ್ರಾಮೀಣ ಬದುಕಿನ ಸೊಗಡು, ಭಾವನೆಗಳು ಹಾಗೂ ಮನರಂಜನೆಯನ್ನು ಒಳಗೊಂಡಿರುವ ಚಿತ್ರ ಇದಾಗಿದೆ. ವಿನಯ್ ರಾಜ್‌ಕುಮಾರ್ ಹಾಗೂ ಮೇಘ ಶೆಟ್ಟಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಪ್ರತಿಯೊಂದು ಹಾಡಿಗೂ ವಿಶೇಷತೆ ಇದೆ” ಎಂದು ತಿಳಿಸಿದರು.
ನಾಯಕ ವಿನಯ್ ರಾಜ್‌ಕುಮಾರ್, “ನಾನು ನಾಯಕನಾಗಿ ಅಭಿನಯಿಸಿರುವ ಒಂಬತ್ತನೇ ಚಿತ್ರ ಇದು. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತದಲ್ಲಿ ಮೂಡಿಬಂದಿರುವ ಎಲ್ಲಾ ಹಾಡುಗಳು ಅದ್ಭುತವಾಗಿವೆ. ಚಿತ್ರಕ್ಕೆ ಪ್ರೇಕ್ಷಕರ ಆಶೀರ್ವಾದ ಬೇಕು” ಎಂದರು.
ನಾಯಕಿ ಮೇಘ ಶೆಟ್ಟಿ, “ಕುಸುಮ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಅದೇ ಹೆಸರಿನ ಹಾಡು ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿರುವುದು ಖುಷಿಯ ವಿಚಾರ” ಎಂದು ಸಂತಸ ವ್ಯಕ್ತಪಡಿಸಿದರು.
ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ಅಪರ್ಣ ವಸ್ತಾರೆ, ಸೀತಾ ಕೋಟೆ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿರುವ ಈ ಚಿತ್ರದಲ್ಲಿ ಲೂಸ್ ಮಾದ ಯೋಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಚಿತ್ರಕ್ಕೆ ಮತ್ತಷ್ಟು ಮೆರಗು ನೀಡಿದೆ.
ಒಂಬತ್ತು ಸುಮಧುರ ಹಾಡುಗಳು, ಗ್ರಾಮೀಣ ಹಿನ್ನೆಲೆ ಮತ್ತು ಬಲಿಷ್ಠ ತಾರಾಬಳಗದೊಂದಿಗೆ “ಗ್ರಾಮಾಯಣ” ಇದೇ ಜುಲೈ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.






























