
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ. 24- ನಗರಸಭೆ ವ್ಯಾಪ್ತಿಗೆ ಬರುವ ಗಾಳಿಪುರ ಹಾಗೂ ಸೋಮವಾರಪೇಟೆ ಬಡಾವಣೆಗಳಿಗೆ ಸಂಪರ್ಕ ಕುಡಿಯುವ ನೀರು ಪೊರೈಸಲು 2 ಕೋಟಿ ರೂ. ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.
ನಗರದ ಗಾಳಿಪುರ ಬಡಾವಣೆಗೆ ಸೇರಿದ ಬೈಪಾಸ್ ರಸ್ತಗೆ ಕೆಪಿಟಿಸಿಎಲ್ ಕಚೇರಿ ಹತ್ತಿರದ ಜಾಗದಲ್ಲಿ ಕರ್ನಾಟಕ ಒಳ ಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಲಿ ವತಿಯಿಂದ 15 ಲಕ್ಷ ಲೀಟರ್ ಸಾರ್ಮಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಚಾಮರಾಜನಗರ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ತೀ. ನರಸೀಪುರದಿಂದ ಚ.ನಗರಕ್ಕೆ ಎಕ್ಸ್‍ಪ್ರೆಸ್ ಪೈಪ್ ಲೈನ್ ತರಲಾಗುತ್ತದೆ. ಅಲ್ಲದೇ ನಾಲ್ಕು ಭಾಗಗಳಲ್ಲಿ ಓವರ್‍ಹೆಡ್ ಟ್ಯಾಂಕ್‍ಗಳನ್ನು ನಿರ್ಮಾಣ ಮಾಡಿ, ಪ್ರತಿ ದಿನವು ಕಾವೇರಿ ನೀರು ತಲುಪು ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈಗಾಗಲೇ 31 ವಾರ್ಡುಗಳಿಗೆ ಕಾವೇರಿ ಕುಡಿಯುವ ನೀರು ಕಲ್ಪಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಮಾಜಿ ಅಧ್ಯಕ್ಷರಾದ ಸೈಯದ್ ರಫಿ, ಸುಹೇಲ್ ಆಲಿ ಖಾನ್, ಅಯುಬ್ ಖಾನ್, ಮಾಜಿ ನಗರಸಭಾ ಅಧ್ಯಕ್ಷರಾದ ಸುರೇಶ್ ನಾಯಕ್, ರಾಜಪ್ಪ, ಯೋಗೇಂದ್ರಗೌಡ, ಚುಡಾ ಸದಸ್ಯರಾದ ದ್ವಾರಕಿ, ಪುಟ್ಟಸ್ವಾಮಿ, ಮಂಡಲಿ ಎಇಇ ಮಂಜುನಾಥ್, ಸೈಟ್ ಇಂಜಿನಿಯರ್ ರವಿಕುಮಾರ್, ಗುತ್ತಿಗೆದಾರರ ರಮೇಶ್ ಇತರರು ಇದ್ದರು.

































