
ಪುತ್ತೂರು: ೨೦೨೮ಕ್ಕೆ ಕರ್ನಾಟಕವನ್ನು ಮಾದಕಮುಕ್ತಗೊಳಿಸಬೇಕಾದರೆ ಅದಕ್ಕೆ ಎಲ್ಲರ ಸಹಕಾರ ಅಗತ್ಯ. ಕೇವಲ ಪೊಲೀಸ್ ಇಲಾಖೆ ಮತ್ತು ಸರ್ಕಾರದಿಂದ ಮಾತ್ರ ಇದನ್ನು ಸಾಧಿಸಲು ಕಷ್ಟಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಭೂಮಾರೆಡ್ಡಿ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪುತ್ತೂರು ಉಪ ವಿಭಾಗ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ನೆಹರುನಗರ ಸುಧಾನ ವಿದ್ಯಾಸಂಸ್ಥೆಗಳ ಎಡ್ವರ್ಡ್ ಸಭಾಂಗಣದಲ್ಲಿ “ಮಾದಕ ದ್ರವ್ಯಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತರ್ ರಾಷ್ಟ್ರೀಯ ದಿನದ ಅಂಗವಾಗಿ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕವನ್ನು ಮಾದಕ ಮುಕ್ತಗೊಳಿಸುವ ಗುರಿಹೊಂದಿರುವ ರಾಜ್ಯ ಸರ್ಕಾರ ಇದಕ್ಕಾಗಿ ಪೊಲೀಸ್ ಇಲಾಖೆಯ ಮೂಲಕ ‘ಬೇಡ ಬ್ರೋ’ ಮತ್ತು ‘ರೈಸ್ ಅಭಿಯಾನ ಆರಂಭಿಸಿದೆ.
ಮಾದಕ ದ್ರವ್ಯಗಳ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರು ಡ್ರಗ್ ಫ್ರೀ ಕರ್ನಾಟಕ ಆಪ್, ೧೧೨ ಸಹಾಯವಾಣಿ ಹಾಗೂ ಇತರೆ ಅಧಿಕೃತ ವ್ಯವಸ್ಥೆಗಳ ಮೂಲಕ ಮಾಹಿತಿ ನೀಡಬೇಕು. ಮಾಹಿತಿ ನೀಡುವವರ ವಿವರವನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದರು.
ಕಾರ್ಯಕ್ರಮವನ್ನು ಪುತ್ತೂರು ಡಿವೈಎಸ್ಪಿ ಪ್ರಮೋದ್ ಕುಮಾರ್ ಬಿ. ಅವರು ಉದ್ಘಾಟಿಸಿದರು.
“ಮಾದಕತೆ ಮಾರಣಾಂತಿಕ” ವಿಷಯದ ಕುರಿತು ಪ್ರೇರಣಾ ಭಾಷಣಕಾರ ಸಾಹಿತಿ ಕೆ. ಎಂ. ಇಕ್ಬಾಲ್ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಹಾಗೂ ಎಸ್‌ಆರ್‌ಕೆ ಲ್ಯಾಡರ್ಸ್ ಮಾಲಕ ಕೇಶವ ಆಮೈ, ಮಾದಕ ದ್ರವ್ಯ ವಿರೋಧಿ ಜನಜಾಗೃತಿ ಅಭಿಯಾನದ ಮ್ಯಾರಥಾನ್ ಯಶಸ್ವಿಗೆ ಕಾರಣವಾದ ರೋಟರಿ ಕ್ಲಬ್ ಪುತ್ತೂರುಯುವದ ಅನಿಲ್ ಮುಂಡೋಡಿ, ಬೀದಿನಾಟಕದ ಮೂಲಕ ಜಾಗೃತಿ ಮೂಡಿಸಿದ ಮೌನೇಶ್ ವಿಶ್ವಕರ್ಮ ಮತ್ತು ಬಾಲು ನಾಯ್ಕ್ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ಆಯ್ಕೆಯಾದ ೫೦ ಮಂದಿ ವಿಜೇತರಿಗೆ ಪುಸ್ತಕ ಬಹುಮಾನ, ಕನ್ನಡ ಶಾಲು ಹಾಗೂ ಪ್ರಶಂಸಾ ಪತ್ರ ನೀಡಲಾಯಿತು.
ವೇದಿಕೆಯಲ್ಲಿ ರೋಟರಿ ಕ್ಲಬ್ ಎಲೈಟ್‌ನ ಅಧ್ಯಕ್ಷ ಮೊಹಮ್ಮದ್ ಶಾಕೀರ್, ಕಾರ್ಯದರ್ಶಿ ಸುಶಾಂತ್ ಹಾರ್ವಿನ್, ರೋ. ಆಸ್ಕರ್ ಆನಂದ್, ರೋ. ಕುಸುಮರಾಜ್ ಉಪಸ್ಥಿತರಿದ್ದರು. ಶಂಕರಿ ಶರ್ಮ ಮತ್ತು ಅಬೂಬಕ್ಕರ್ ಆರ್ಲಪದವು ಪ್ರಬಂಧ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ರೋಟರಿ ಕ್ಲಬ್ ಪುತ್ತೂರು ಯುವ ಕಾರ್ಯದರ್ಶಿ ಅನುಪ್ ಕೆ. ಜೆ. ವಂದಿಸಿದರು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.


































