
ಸಂಜೆವಾಣಿ ನ್ಯೂಸ್
ಮೈಸೂರು: ಸೆ.09:- ರೈತರು, ಸಾಮಾನ್ಯ ಜನರು ಮತ್ತು ಗ್ರಾಮೀಣ ಸಮುದಾಯಗಳ ಕಳಕಳಿಗಳಿಗೆ ಸ್ಪಂದಿಸುವ ಸಾಮಥ್ರ್ಯವಿರುವ ಯುವ, ಶಿಕ್ಷಣವಂತ ಹಾಗೂ ಜವಾಬ್ದಾರಿಯುತ ನಾಯಕರ ನೂತನ ಪೀಳಿಗೆಯ ಅಗತ್ಯ ಭಾರತಕ್ಕಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ (ಎಸ್‍ಪಿ) ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
ಕೂರ್ಗಳ್ಳಿಯ ಎಕ್ಸೆಲ್ ಪಬ್ಲಿಕ್ ಶಾಲೆಯಲ್ಲಿ ಸಿಐಐ ಮೈಸೂರಿನ ಯುವ ಸಂಘಟನೆಯಾದ ‘ಯಂಗ್ ಇಂಡಿಯನ್ಸ್’ (ಙi) ಮಂಗಳವಾರ ಆಯೋಜಿಸಿದ್ದ ಎರಡು ದಿನಗಳ ‘ಯಂಗ್ ಇಂಡಿಯನ್ಸ್ ಪಾರ್ಲಿಮೆಂಟ್ (ಙiP) 2026 – ದಕ್ಷಿಣ ಪ್ರಾದೇಶಿಕ ಸುತ್ತು’ ಉದ್ಘಾಟಿಸಿ ಅವರು ಮಾತನಾಡಿದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಸಂಸತ್ತಿನ ಕಾರ್ಯಾಚರಣೆಯ ಪ್ರಾಯೋಗಿಕ ಅನುಭವವನ್ನು ನೀಡುತ್ತದೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ ಎಂದರು. ಸಂವಿಧಾನವು ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಿಗೆ ಚುನಾವಣೆಗಳು, ಅಧಿವೇಶನಗಳ ನಡಾವಳಿ ಮತ್ತು ವಿಧೇಯಕಗಳನ್ನು ಅಂಗೀಕರಿಸುವ ಪ್ರಕ್ರಿಯೆಗಳನ್ನು ಒಳಗೊಂಡಂತೆ ಸ್ಪಷ್ಟ ಚೌಕಟ್ಟನ್ನು ಒದಗಿಸುತ್ತದೆ. “ಪ್ರತಿಯೊಬ್ಬ ವ್ಯಕ್ತಿಯಲ್ಲೂ ನಾಯಕತ್ವದ ಗುಣಗಳಿರುತ್ತವೆ, ಆದರೆ ಆ ಗುಣಗಳನ್ನು ಹೊರತರಲು ಇಂತಹ ಅವಕಾಶಗಳ ಅಗತ್ಯವಿದೆ,” ಎಂದು ಹೇಳಿದ ಅವರು, ಸಾರ್ವಜನಿಕ ಜೀವನದಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಜೊತೆಗೆ ರೈತರ ಕಲ್ಯಾಣ, ಶಿಕ್ಷಣ, ಆರೋಗ್ಯ ರಕ್ಷಣೆ, ಗ್ರಾಮೀಣ ಕುಡಿಯುವ ನೀರು ಪೂರೈಕೆ, ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿಯತ್ತ ಯುವ ನಾಯಕರು ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಸಿಐಐ ಮೈಸೂರು ಘಟಕದ ಅಧ್ಯಕ್ಷ ಉತ್ಸವ್ ಅಗರ್ವಾಲ್ ಮಾತನಾಡಿ, ನಾಯಕತ್ವ ಎಂಬುದು ಕೇವಲ ಹುದ್ದೆಯಲ್ಲ, ಅದು ಮೌಲ್ಯಗಳು, ಮೂಲಚಿಂತನೆ ಮತ್ತು ಜನರೊಂದಿಗೆ ಕೆಲಸ ಮಾಡುವ ಸಾಮಥ್ರ್ಯವಾಗಿದೆ ಎಂದರು.
‘ವೈಐಪಿ’ ಕಾರ್ಯಕ್ರಮವನ್ನು “ನಾಯಕತ್ವದ ಪ್ರಯೋಗಾಲಯ” ಎಂದು ಬಣ್ಣಿಸಿದ ಅವರು, ಕೃತಕ ಬುದ್ಧಿಮತ್ತೆಯ (ಎಐ) ಈ ಯುಗದಲ್ಲಿ ವಿದ್ಯಾರ್ಥಿಗಳು ಸ್ವತಂತ್ರ ಮತ್ತು ಮೂಲ ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. “ಎಐ ಯುಗದಲ್ಲಿ ಮಾಹಿತಿ, ಅಂಕಿಅಂಶಗಳು ಮತ್ತು ಸತ್ಯಗಳು ಎಲ್ಲರಿಗೂ ಸುಲಭವಾಗಿ ಸಿಗುತ್ತವೆ. ಆದರೆ ನಿಮ್ಮನ್ನು ಇತರರಿಗಿಂತ ಭಿನ್ನವಾಗಿಸುವುದು ನಿಮ್ಮ ಸ್ವಂತ ಚಿಂತನೆ,” ಎಂದು ಹೇಳಿದ ಅವರು, ವಿದ್ಯಾರ್ಥಿಗಳು ಮಾನವೀಯ ಸ್ಪಂದನೆಯನ್ನು ಉಳಿಸಿಕೊಂಡು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಯಂಗ್ ಇಂಡಿಯನ್ಸ್ ಮೈಸೂರು ಘಟಕದ ಅಧ್ಯಕ್ಷೆ ಪ್ರಿಯಾಂಕಾ ಶ್ರೀಧರ್ ಮಾತನಾಡಿ, ವೈಐಪಿ ವಿದ್ಯಾರ್ಥಿಗಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಸಂಸತ್ತಿನ ಕಲಾಪಗಳ ಪ್ರತ್ಯಕ್ಷ ಅನುಭವವನ್ನು ಪಡೆಯಲು ಉತ್ತಮ ವೇದಿಕೆಯನ್ನು ಒದಗಿಸುತ್ತದೆ ಎಂದರು.
ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವಂತೆ ಪೆÇ್ರೀತ್ಸಾಹಿಸಿದ ಅವರು, ಈ ಪ್ರಾದೇಶಿಕ ಸುತ್ತು ಕೇವಲ ಒಂದು ಆರಂಭವಷ್ಟೇ. ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಲು ಬಯಸುವವರು ಭವಿಷ್ಯದಲ್ಲಿ ದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಮತ್ತು ಬಲವಾದ ತಂತ್ರಗಳನ್ನು ರೂಪಿಸಬೇಕಾಗುತ್ತದೆ ಎಂದರು.
“ಇದು ಕೇವಲ ಸಣ್ಣ ಹೋರಾಟ. ನೀವು ನಿಜವಾಗಿಯೂ ಸಂಸತ್ತನ್ನು ಪ್ರವೇಶಿಸಲು ಬಯಸಿದರೆ, ದೊಡ್ಡ ಸವಾಲುಗಳನ್ನು ಎದುರಿಸಬೇಕು ಮತ್ತು ಬೃಹತ್ ತಂತ್ರಗಳನ್ನು ರೂಪಿಸಬೇಕಾಗುತ್ತದೆ,” ಎಂದರು. ಕಳೆದ 10 ದಿನಗಳಿಂದ ವಿದ್ಯಾರ್ಥಿಗಳು ತೋರಿದ ಉತ್ಸಾಹ ಮತ್ತು ಸಿದ್ಧತೆಯನ್ನು ಅವರು ಶ್ಲಾಘಿಸಿದರು ಹಾಗೂ ರಾಷ್ಟ್ರೀಯ ಸುತ್ತಿಗೆ ಅರ್ಹತೆ ಪಡೆಯುವವರಿಗೆ ಶುಭ ಹಾರೈಸಿದರು.
ಬುಧವಾರ ಮುಕ್ತಾಯಗೊಳ್ಳಲಿರುವ ಈ ಪ್ರಾದೇಶಿಕ ಸುತ್ತಿನಲ್ಲಿ ಮೈಸೂರು, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಕೋಝಿಕ್ಕೋಡ್, ಕೊಚ್ಚಿ ಮತ್ತು ತಿರುವನಂತಪುರಂ ಸೇರಿದಂತೆ ಕರ್ನಾಟಕ ಮತ್ತು ಕೇರಳದ ಸುಮಾರು 165 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.


























