Home ಜಿಲ್ಲೆ ಮೈಸೂರು ಬಿ.ಖಾತೆಯಿಂದ ಎ.ಖಾತೆಗೆ ಪರಿವರ್ತಿಸುವ ಆದೇಶ ಶೀಘ್ರದಲ್ಲೇ ಜಾರಿ

ಬಿ.ಖಾತೆಯಿಂದ ಎ.ಖಾತೆಗೆ ಪರಿವರ್ತಿಸುವ ಆದೇಶ ಶೀಘ್ರದಲ್ಲೇ ಜಾರಿ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.11:
ಬೆಂಗಳೂರು ಮಹಾನಗರಕ್ಕೆ ಸೀಮಿತವಾಗಿದ್ದ ಬಿ. ಖಾತೆಯನ್ನು ಎ ಖಾತೆಗೆ ಪರಿವರ್ತಿಸುವ ಆದೇಶವನ್ನು ರಾಜ್ಯ ಸರ್ಕಾರ ರಾಜ್ಯದಾದ್ಯಂತ ವಿಸ್ತರಿಸಿರುವುದಾಗಿ ತಿಳಿಸಿದ್ದರೂ ಈ ಕುರಿತ ಅಧಿಕೃತ ಸರ್ಕಾರಿ ಆದೇಶ ಇದುವರೆಗೂ ಹೊರ ಬಿದ್ದಿಲ್ಲ. ಇದರಿಂದ ಗ್ರಾಮೀಣ ಪ್ರದೇಶದ ಸಾವಿರಾರು ರೈತರು ತಮ್ಮ ಮನೆ ಮತ್ತು ನಿವೇಶನಗಳನ್ನು ಬಿ. ಖಾತೆಯಿಂದ ಎ ಖಾತೆಗೆ ಪರಿವರ್ತಿಸಲು ಅಡಚಣೆಯಾಗಿದೆ.


ಬೆಂಗಳೂರು ಮಹಾನಗರಕ್ಕೆ ಮಾತ್ರ ಸೀಮಿತವಾಗಿದ್ದ ಬಿ. ಖಾತೆಯನ್ನು ಎ ಖಾತೆಗೆ ಪರಿವರ್ತಿಸುವ ಆದೇಶವನ್ನು ರಾಜ್ಯದಾದ್ಯಂತ ವಿಸ್ತರಿಸುತ್ತಿರುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದರು.
ರಾಜ್ಯ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರೂ ಕೂಡ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ ಬಿ.ಖಾತೆಯನ್ನು ಎ.ಖಾತೆಗೆ ಪರಿವರ್ತಿಸುವ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದರು. ಮುಖ್ಯಮಂತ್ರಿಗಳ ಆದೇಶ ಕೆ.ಆರ್.ಪೇಟೆ ತಾಲೂಕಿನಲ್ಲಿ ಇದುವರೆಗೂ ಕಾರ್ಯರೂಪಕ್ಕೆ ಬಾರದ ಹಿನ್ನೆಲೆಯಲ್ಲಿ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸುಷ್ಮಾ ಅವರನ್ನು ಭೇಟಿ ಮಾಡಿದಾಗ ಈ ಕುರಿತು ಯಾವುದೇ ಸರ್ಕಾರಿ ಆದೇಶ ಇದುವರೆಗೂ ಬಾರದಿರುವುದು ಬಯಲಿಗೆ ಬಂದಿದೆ. ಈ ಕುರಿತು ರೈತ ಮುಖಂಡರ ಸಮ್ಮುಖದಲ್ಲಿಯೇ ತಾ.ಪಂ ಇ.ಓ ಸುಷ್ಮಾ ಮೇಲಧಿಕಾರಿಗಳನ್ನು ಸಂಪರ್ಕಿಸಿದಾಗ ರಾಜ್ಯ ಸರ್ಕಾರ ಈ ಕುರಿತು ಪ್ರಕಟಿಸಿದ್ದು ಜಿಲ್ಲೆಯಲ್ಲಿ ಇದನ್ನು ಶೀಘ್ರದಲ್ಲಿಯೇ ಜಾರಿಗೆ ತರುವ ಉತ್ತರ ದೊರಕಿದೆ.


ಬಿ.ಖಾತೆಯನ್ನು ಎ ಖಾತೆಯಾಗಿ ಪರಿವರ್ತಿಸಲು ಆದೇಶ ಹೊರಡಿಸಿರುವುದಾಗಿ ಮುಖ್ಯಮಂತ್ರಿಗಳು ಹೆಳಿದ್ದರೂ ಈ ಕುರಿತ ಅಧಿಕೃತ ಸರ್ಕಾರಿ ಆದೇಶ ಇದುವರೆಗೂ ಜಿಲ್ಲೆಯಲ್ಲಿ ಜಾರಿಯಾಗದಿರುವ ಬಗ್ಗೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಕಿಡಿಕಾರಿದರು.


ಈ ಹಿಂದೆ ನಮ್ಮ ಪೂರ್ವಜರು ಹಳ್ಳಿಗಳಲ್ಲಿ ಮನೆಗಳನ್ನು ಕಟ್ಟಿಕೊಳ್ಳುವಾಗ ಯಾವುದೇ ರೀತಿಯ ಎ ಖಾತೆ, ಬಿ.ಖಾತೆ ನಿಯಮಗಳು ಇರಲ್ಲಿಲ್ಲ. ಆಳುವ ಸರ್ಕಾರಗಳು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುವಾಗ ಅನಗತ್ಯ ನಿಯಮಗಳನ್ನು ರೂಪಿಸಿ ರೈತರು ತಮ್ಮ ಮನೆ ಮಠಗಳನ್ನು ತಮ್ಮದೆಂದು ಸಾಬೀತು ಪಡಿಸಿಕೊಳ್ಳಲು ಹರಸಾಹಸ ಪಡಬೇಕಾಗಿದೆ. ಬಹುತೇಕ ಜನ ತಾಲೂಕಿನಲ್ಲಿ ತೋಟದ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಈ ಮನೆಗಳನ್ನು ಎ ಖಾತೆಯ ಮೂಲಕ ಅಧಿಕೃತಗೊಳಿಸುವ ಕೆಲಸ ಆಗಬೇಕಾಗಿದೆ. ತಾಲೂಕಿನಾದ್ಯಂತ ಬಹುತೇಕ ಸ್ಥಳಾಂತರಿತ ಗ್ರಾಮಗಳಿದ್ದು ಇವುಗಳಲ್ಲೆವೂ ಸರ್ಕಾರಿ ದಾಖಲೆಗಳಲ್ಲಿ ಗ್ರಾಮಠಾಣಾ ಎಂದೇ ನಮೂದಾಗಿವೆ.
ಇಂತಹ ಗ್ರಾಮಗಳಲ್ಲಿ ನೂರಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ರೈತ ಕುಟುಂಬಗಳು ತಮ್ಮ ಮನೆ ಮತ್ತು ನಿವೇಶನಗಳನ್ನು ಇದುವರೆಗೂ ಎ ಖಾತೆಯನ್ನಾಗಿ ಮಾಡಿಸಿಕೊಂಡಿಲ್ಲ. ನೂರಾರು ವರ್ಷಗಳಿಂದ ತಮ್ಮ ಪೂರ್ವಜರ ಮನೆಗಳಲ್ಲಿ ವಾಸಿಸುತ್ತಿರುವ ರೈತರು ಆ ಮನೆಗಳನ್ನು ಇದೀಗ ಸರ್ವೆ ಮಾಡಿಸಿ ಸ್ಕೆಚ್ ಮಾಡಿಸಲು ಸಾಧ್ಯವಿಲ್ಲ.


ಏಕೆಂದರೆ ಎಷ್ಟೋ ರೈತರ ಬಳಿ ಸದರಿ ಮನೆಗಳು ತಮ್ಮ ಪೂರ್ವಜರಿಗೆ ಯಾವ ರೀತಿಯಿಂದ ಬಂದಿದೆ ಎನ್ನುವ ದಾಖಲೆಗಳೇ ಇಲ್ಲ. ಈ ಕಾರಣದಿಂದ ಎಲ್ಲಾ ಬಿ.ಖಾತೆಗಳನ್ನು ಎ ಖಾತೆಯನ್ನಾಗಿಸುವ ರಾಜ್ಯ ಸರ್ಕಾರದ ನಿರ್ಧಾರ ರೈತ ಕುಟುಂಬಗಳಲ್ಲಿ ಸಂತಸ ಮೂಡಿಸಿತ್ತು. ಆದರೆ ಮುಖ್ಯಮಂತ್ರಿಗಳ ಮಾತು ಇದುವರೆಗೂ ಸರ್ಕಾರಿ ಆದೇಶವಾಗಿ ಹೊರಬಾರದಿರುವುದು ಖಂಡನಾರ್ಹ ಎಂದಿರುವ ಪುಟ್ಟೇಗೌಡ ತಕ್ಷಣವೇ ಈ ಕುರಿತು ಅಧಿಕೃತ ಸರ್ಕಾರಿ ಆದೇಶವನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೂ ಕಳುಹಿಸುವಂತೆ ಆಗ್ರಹಿಸಿದರು.