Home ಸಿನೆಮಾ ಬಾದಾಮಿ ಕೋಟೆಯಲ್ಲಿ ಕನ್ನಡ ಸಂಭ್ರಮ

ಬಾದಾಮಿ ಕೋಟೆಯಲ್ಲಿ ಕನ್ನಡ ಸಂಭ್ರಮ

‘ಕರ್ಣಾಟಬಲಂ ಅಜೇಯಂ’ ಶೀರ್ಷಿಕೆ ಗೀತೆಗೆ ಅದ್ದೂರಿ ಚಿತ್ರೀಕರಣ

ಐತಿಹಾಸಿಕ ಬಾದಾಮಿ ಕೋಟೆ ಕನ್ನಡ ಸಂಸ್ಕೃತಿ, ಜನಪದ ಕಲೆ ಮತ್ತು ಸಾವಿರಾರು ಕಲಾವಿದರ ಹೆಜ್ಜೆಗಳಿಂದ ಕಂಗೊಳಿಸಿತು. ಶಾಸಕ, ನಟ ಹಾಗೂ ನಿರ್ಮಾಪಕ ಸಿ.ಪಿ. ಯೋಗೀಶ್ವರ್ ಅವರ ಪುತ್ರ ಧ್ಯಾನ್ ಯೋಗೀಶ್ವರ್ ಅಭಿನಯದ ಚೊಚ್ಚಲ ಚಿತ್ರ ‘ಕರ್ಣಾಟಬಲಂ ಅಜೇಯಂ’ನ ಶೀರ್ಷಿಕೆ ಗೀತೆಯನ್ನು ಬೃಹತ್ ಪ್ರಮಾಣದಲ್ಲಿ ಚಿತ್ರೀಕರಿಸಲಾಗಿದ್ದು, ಅದರ ವೈಭವ ಚಿತ್ರತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲಿನ ಐತಿಹಾಸಿಕ ಹಿನ್ನೆಲೆಯ ನಡುವೆ ‘ಬಾದಾಮಿ ಸೀಮೆಯಿದು ಎಂತ ಸೊಬಗು…’ ಎಂಬ ಗೀತೆಯನ್ನು ಚಿತ್ರೀಕರಿಸಲಾಯಿತು. ಯಕ್ಷಗಾನ, ವೀರಗಾಸೆ, ನಂದಿಕೋಲು ಸೇರಿದಂತೆ ಹಲವು ಜನಪದ ಕಲಾ ತಂಡಗಳ ಸಾವಿರಾರು ಕಲಾವಿದರು ಭಾಗವಹಿಸಿದ್ದು, ನಾಯಕ ಧ್ಯಾನ್ ಯೋಗೀಶ್ವರ್ ಅವರೊಂದಿಗೆ ವರ್ಣರಂಜಿತ ಹೆಜ್ಜೆ ಹಾಕಿದರು. ತ್ರಿಲೋಕ್ ತ್ರಿವಿಕ್ರಮ್ ಸಾಹಿತ್ಯದ ಈ ಹಾಡಿಗೆ ಮೋಹನ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದು, ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ.

ಚಿತ್ರೀಕರಣದ ವೇಳೆ ಮಾತನಾಡಿದ ನಿರ್ಮಾಪಕ ಸಿ.ಪಿ. ಯೋಗೀಶ್ವರ್ ‘ಕರ್ಣಾಟಬಲಂ ಅಜೇಯಂ’ ಕೇವಲ ಐತಿಹಾಸಿಕ ಸಿನಿಮಾ ಅಲ್ಲ; ಚಾಲುಕ್ಯರ ವೈಭವ, ಮಹಾದಾಯಿ ಹೋರಾಟ, ರೈತರ ಸಮಸ್ಯೆ ಹಾಗೂ ಇಂದಿನ ಸಮಾಜದ ವಾಸ್ತವಗಳನ್ನು ಜೋಡಿಸುವ ಕಥೆಯಾಗಿದೆ. ಪುಲಕೇಶಿಯ ಕಾಲದಿಂದ ಇಂದಿನ ಕರ್ನಾಟಕದವರೆಗೆ ಸಾಗುವ ಈ ಕಥೆ ಯುವಪೀಳಿಗೆಗೆ ಇತಿಹಾಸದ ಅರಿವು ಮೂಡಿಸುವ ಪ್ರಯತ್ನವಾಗಲಿದೆ ಎಂದು ಯೋಗೀಶ್ವರ್ ಹೇಳಿದರು. ಸುಮಾರು 25 ವರ್ಷಗಳ ಬಳಿಕ ತಾವು ನಟನಾಗಿ ಮರಳಿದ್ದು, ರೈತ ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ತಿಳಿಸಿದರು.

ನಿರ್ದೇಶಕ ನಾಗಣ್ಣ ಮಾತನಾಡಿ, ಆರನೇ ಶತಮಾನದ ಐತಿಹಾಸಿಕ ಹಿನ್ನೆಲೆ ಮತ್ತು ಇಂದಿನ ಸಾಮಾಜಿಕ ವಾಸ್ತವಗಳನ್ನು ಬೆಸೆಯುವ ಕಥೆಯೇ ಚಿತ್ರದ ವಿಶೇಷ ಎಂದರು. ಶೀರ್ಷಿಕೆ ಗೀತೆಯ ಚಿತ್ರೀಕರಣದಲ್ಲಿ ಸಾವಿರಕ್ಕೂ ಹೆಚ್ಚು ಕಲಾವಿದರು ಹಾಗೂ ತಂತ್ರಜ್ಞರು ಭಾಗವಹಿಸಿದ್ದು, ಮುಂದಿನ ದಿನಗಳಲ್ಲಿ ಚನ್ನಪಟ್ಟಣ, ಬಾಗಲಕೋಟೆ, ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ಚಿತ್ರೀಕರಣ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು.

ನಾಯಕ ಧ್ಯಾನ್ ಯೋಗೀಶ್ವರ್ ಮಾತನಾಡಿ, ಬಾಲ್ಯದಿಂದಲೂ ನಟನಾಗಬೇಕೆಂಬ ಕನಸು ಹೊಂದಿದ್ದ ನಾನು, ಅದನ್ನು ಈ ಚಿತ್ರದ ಮೂಲಕ ನನಸಾಗಿಸಿಕೊಂಡಿದ್ದೇನೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಚಿತ್ರ ಮೂಡಿಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸಂಕ್ರಾಂತಿ ಪ್ರಯುಕ್ತ ಜನವರಿ 15ರಂದು ಚಿತ್ರವನ್ನು ಬಿಡುಗಡೆ ಮಾಡುವ ಗುರಿಯಿದೆ ಎಂದರು.

ಚಿತ್ರದಲ್ಲಿ ಧ್ಯಾನ್ ಯೋಗೀಶ್ವರ್‌ಗೆ ನಾಯಕಿಯಾಗಿ ಮಣಿಕಾ ವಿಶ್ವಕರ್ಮ ಅಭಿನಯಿಸಿದ್ದು, ಲಯ, ಸಂಪತ್ ಮೈತ್ರೇಯ, ಮಾನಸಿ ಸುಧೀರ್, ಬಲ ರಾಜ್‌ವಾಡಿ ಸೇರಿದಂತೆ ದೊಡ್ಡ ತಾರಾಗಣವಿದೆ. ಶೇಖರ್ ಚಂದ್ರು ಛಾಯಾಗ್ರಹಣ, ವಿ. ಹರಿಕೃಷ್ಣ ಸಂಗೀತ, ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಹಾಗೂ ಎಂ.ಎಸ್. ರಮೇಶ್ ಅವರ ಕಥೆ-ಸಂಭಾಷಣೆ ಚಿತ್ರದ ಪ್ರಮುಖ ಆಕರ್ಷಣೆಗಳಾಗಿವೆ.