
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.3: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐ ಆರ್) ಪ್ರಕ್ರಿಯೆಯಲ್ಲಿ ನಗರ ವಿಧಾನಸಭಾ ಕ್ಷೇತ್ರದ 7,561 ಮತದಾರರ ಹೆಸರುಗಳನ್ನು ಅಕ್ರಮವಾಗಿ ಮರು ಪರಿಶೀಲನೆಗೆ ಒಳಪಡಿಸಿ ಡಿಲೀಟ್ ಮಾಡುವ ಸಂಚು ಬಿಜೆಪಿಯಿಂದನಡೆದಿದೆಂದು ನಗರ ಶಾಸಕ ನಾರಾ ಭಾರತ್ ರೆಡ್ಡಿ ಆರೋಪಿಸಿದ್ದಾರೆ
ಅವರು ನಿನ್ನೆ ಮಧ್ಯಾಹ್ನ
ನಗರದ ರಾಘವೇಂದ್ರ ಚಿತ್ರಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ.ಎಸ್ಐಆರ್ ಪ್ರಕ್ರಿಯೆಯು ಜೂನ್ 29, 2026ರಂದು ಆರಂಭಗೊಂಡಿದ್ದು, ಆ.24ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಕರಡು ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಅಳಿಕೆ ಹಾಗೂ ಆಕ್ಷೇಪಣೆ ಸಲ್ಲಿಸಲು ಚುನಾವಣಾ ಆಯೋಗ ಅವಕಾಶ ನೀಡಿತ್ತು. ಇದೇ ಸಂದರ್ಭದಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ 7,561 ಮತದಾರರ ಹೆಸರುಗಳನ್ನು ಮರುಪರಿಶೀಲನೆ ಮಾಡುವಂತೆ ಮನವಿ ಸಲ್ಲಿಸಲಾಗಿದ್ದು, ಈ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆಂದು ಆರೋಪಿಸಿದರು.
ಎಸ್ಐಆರ್ ನಿಯಮಗಳ ಪ್ರಕಾರ ಒಬ್ಬ ಬಿಎಲ್ಎ. ಗರಿಷ್ಠ 30 ಫಾರಂ-7ಗಳನ್ನು ಮಾತ್ರ ಸಲ್ಲಿಸಲು ಅವಕಾಶವಿದೆ. ಆದರೆ 7,561 ಮತದಾರರ ಹೆಸರುಗಳ ಕುರಿತು ಫಾರಂ-7ಗಳನ್ನು ಸಲ್ಲಿಸಿರುವುದು ಹಾಗೂ ಅವುಗಳನ್ನು ಅಧಿಕಾರಿಗಳು ಸ್ವೀಕರಿಸಲಿಲ್ಲವೆಂದಾಗ ಸುಟ್ಟು ಸಾಕ್ಷ್ಯ ನಾಶ ಮಾಡಿದ್ದಾರೆ, ಮತ್ತೆ ಪ್ರತ್ಯೇಕ ದೂರು ಸಲ್ಲಿಸಿ, ಮರು ಪರೀಲನೆಗೆ ಮುಂದಾಗಿರುವುದೇ ಹಲವು ಪ್ರಶ್ನೆಗಳಿಗೆಕಾರಣವಾಗಿದೆ, ಇದೊಂದು ವ್ಯವಸ್ಥಿತ ಸಂಚು ಎಂದಿದ್ದಾರೆ.
ಹೆಸರು ಅಳಿಸಲು ಸಲ್ಲಿಸಲಾದ ಮತದಾರರ ಪಟ್ಟಿಯಲ್ಲಿಶೇ.98.08ರಷ್ಟು ಮತದಾರರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರೆಂಬುದು ಗಮನಾರ್ಹ ಸಂಗತಿ, ಕೇವಲ ಅಲ್ಪಸಂಖ್ಯಾತರ ಮತಗಳು ಮಾತ್ರವಲ್ಲ, ಬಿಜೆಪಿಗೆ ಮತ ಹಾಕದ ಎಲ್ಲ ಸಮುದಾಯದವರ ಮತಗಳನ್ನು ಅಳಿಸಿ ಹಾಕುವ ಯತ್ನ ಇದಾಗಿದೆ.
“ಫಾರಂ-7ಗಳನ್ನು ದೊಡ್ಡ ಸಂಖ್ಯೆಯಲ್ಲಿ ಮುದ್ರಿಸಿ, ಸಿದ್ಧಪಡಿಸಿ ಸಲ್ಲಿಸಲಾಗಿದೆ. ಇಷ್ಟೊಂದು ಪ್ರಮಾಣದ ಫಾರಂ-7ಗಳನ್ನು ಯಾರು ಪ್ರಿಂಟ್ ಮಾಡಿಸಿದರು? ಯಾರು ಅಧಿಕಾರಿಗಳಿಗೆ ನೀಡಿದರು? ಅಧಿಕಾರಿಗಳು ಫಾರಂ-7 ಅರ್ಜಿ ಸ್ವೀಕರಿಸದಿದ್ದಾಗ ಅವುಗಳನ್ನು ಎಲ್ಲಿ ಸುಡಲಾಗಿದೆ? ಇದರ ಹಿಂದೆ ಯಾರಿದ್ದಾರೆ ಎಂಬ ಮಾಹಿತಿ ನನ್ನ ಬಳಿಯಿದೆ, ಇದನ್ನು ಪೊಲೀಸರು ತನಿಖೆ ಮೂಲಕ ಪತ್ತೆಹಚ್ಚಬೇಕು. ಈ ಷಡ್ಯಂತ್ರದ ಹಿಂದೆ ನೋಂದಣಿಯಾಗದ ಸಂಸ್ಥೆ ಇದೆ ಎಂದು ಆರ್ ಎಸ್ ಎಸ್ ಹೆಸರೇಳದೆ ಆರೋಪಿಸಿದರು. ಈ ವಿಚಾರದಲ್ಲಿ ತಪ್ಪಿತಸ್ಥರು ಯಾರೆಂಬುದು ಗೊತ್ತಾದಾಗ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲೇಬೇಕು, ಈಗ ಮತದಾರರೂ ಕೂಡ ಅಂಥವರ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ, ಅಂತಹ ನಾಗರಿಕರಿಗೆ ನಾನು ಕಾನೂನು ನೆರವು ನೀಡಲಿದ್ದೇನೆ ಎಂದಿದ್ದಾರೆ.
ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳ ಮತದಾರರ ಪಟ್ಟಿಯನ್ನು ಗುರಿಯಾಗಿಸಿಕೊಂಡು ಹೆಸರುಗಳನ್ನು ತೆಗೆದುಹಾಕುವ ಪ್ರಯತ್ನ ನಡೆದಿದೆ ಎಂಬ ಅನುಮಾನವಿದೆ. ಬೂತ್ನಿಂದ ಬೂತ್ಗೆ ಮತದಾರರ ಪಟ್ಟಿಯನ್ನು ಪರಿಶೀಲಿಸುವ ಮೂಲಕ ಹೆಸರುಗಳನ್ನು ಡಿಲೀಟ್ ಮಾಡುವ ಪ್ರಕ್ರಿಯೆ ನಡೆದಿದ್ದು, ಜನರ ಮತದಾನದ ಹಕ್ಕನ್ನು ಕಸಿದುಕೊಂಡು ಅವರಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ಸೌಲಭ್ಯಗಳು ದೊರೆಯದಂತೆ ಮಾಡುವ ಉದ್ದೇಶದಿಂದ ಈ ಅಕ್ರಮ ನಡೆದಿದೆಂಬ ಅನುಮಾನವಿದೆಂದರು.
ಮತದಾರರ ಹೆಸರನ್ನು ಅಕ್ರಮವಾಗಿ ಡಿಲೀಟ್ ಮಾಡುವುದು ಅಪರಾಧವಾಗಿದ್ದು, ಈ ವಿಚಾರದಲ್ಲಿ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳ ಜವಾಬ್ದಾರಿಯನ್ನೂ ಪರಿಶೀಲಿಸಬೇಕು ಎಂದು ಆಗ್ರಹಿಸಿ. ಬಿಎಲ್ಒ ಒಬ್ಬರು ಪೊಲೀಸ್ ಠಾಣೆಗೆ ತೆರಳಿದ ಸಂದರ್ಭದಲ್ಲಿ ಪ್ರಕರಣ ದಾಖಲಿಸುವ ವಿಚಾರದಲ್ಲಿ ಉಂಟಾದ ಗೊಂದಲದ ಬಗ್ಗೆಯೂ ಪ್ರಶ್ನಿಸಿದ ಅವರು, ಪ್ರಕರಣ ದಾಖಲಿಸುವ ಅಧಿಕಾರ ಯಾರಿಗಿದೆ ಎಂಬುದನ್ನು ಎಸ್ಪಿ ಅವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂಬಂಧ ಸಲ್ಲಿಕೆಯಾಗಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ದೂರಿನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಫಾರಂ-7ಗಳನ್ನು ಸಲ್ಲಿಸಿರುವುದು, ಒಂದೇ ಸಮುದಾಯದ ಮತದಾರರ ಹೆಸರುಗಳನ್ನು ಗುರಿಯಾಗಿಸಿಕೊಂಡಿರುವುದು ಹಾಗೂ ಚುನಾವಣಾ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿರುವ ಆರೋಪಗಳನ್ನು ಮಾಡಲಾಗಿದೆ.
ಮತದಾರರ ಹೆಸರುಗಳನ್ನು ಅಂತಿಮವಾಗಿ ಅಳಿಸುವ ಅಥವಾ ಉಳಿಸುವ ಕ್ರಮವು ಅರ್ಜಿಗಳ ಪರಿಶೀಲನೆ, ಆಕ್ಷೇಪಣೆ ಹಾಗೂ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳ ಕಾನೂನುಬದ್ಧ ನಿರ್ಧಾರದ ನಂತರವೇ ನಡೆಯಬೇಕಿದೆಂದರು.
ಕಾಂಗ್ರೆಸ್ ಪಕ್ಷ ಆಕ್ಷೇಪಣೆ ಸಲ್ಲಿಸಿರಲಿಲ್ಲವೇ? ಎಂಬ ಮಾಧ್ಯಮಗಳ ಪ್ರಶ್ನೆಗೆ. ಕಾಂಗ್ರೆಸ್ ಪಕ್ಷ ಅಂತಹ ನೀಚ ಕೆಲಸ ಎಂದೂ ಮಾಡುವುದಿಲ್ಲ, ಮತದಾರರು ಚುನಾವಣೆಯಲ್ಲಿ ಯಾವ ಪಕ್ಷವನ್ನಾದರೂ ಬೆಂಬಲಿಸಲಿ, ಆದರೆ ಅವರ ಮತದಾನದ ಹಕ್ಕಿನ ರಕ್ಷಣೆ ನನ್ನ ಜವಾಬ್ದಾರಿಯಾಗಿದೆಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಬಿಎಲ್ಎ-2 ಗೌತಮ್ ಎಸ್, ಪಾಲಿಕೆಯ ಸದಸ್ಯ ಶ್ರೀನ೮ವಾಸುಲು ಮಿಂಚು , ಮುಖಂಡರಾದ ಬಿಆರೆಲ್ ಸೀನಾ ಮತ್ತಿತರರು ಇದ್ದರು.


























