Home ಜಿಲ್ಲೆ ಮೈಸೂರು ದೇಶದಲ್ಲಿ ಅರಾಜಕತೆ ವಾತಾವರಣ ನಿರ್ಮಾಣ: ಎಚ್.ವಿಶ್ವನಾಥ್ ಬೇಸರ

ದೇಶದಲ್ಲಿ ಅರಾಜಕತೆ ವಾತಾವರಣ ನಿರ್ಮಾಣ: ಎಚ್.ವಿಶ್ವನಾಥ್ ಬೇಸರ

ಸಂಜೆವಾಣಿ ನ್ಯೂಸ್
ಮೈಸೂರು, ಜು.29:-
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸರ್ಕಾರ ಅಕ್ಷರ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಮೊದಲ ಆದ್ಯತೆ ನೀಡಬೇಕು. ಆದರೆ, ಪ್ರಸ್ತುತ ದೇಶ ಹಾಗೂ ರಾಜ್ಯದಲ್ಲಿ ಈ ಎರಡೂ ರಂಗಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದ್ದು, ಅರಾಜಕತೆಯ ವಾತಾವರಣ ನಿರ್ಮಾಣವಾಗಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಚ್.ವಿಶ್ವನಾಥ್ ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.


ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಆಡಳಿತ ವೈಫಲ್ಯ, ಶಿಕ್ಷಣ-ಆರೋಗ್ಯ ಕ್ಷೇತ್ರದ ದುಸ್ಥಿತಿ, ಕೆಪಿಎಸ್‍ಸಿ ಭ್ರಷ್ಟಾಚಾರ ಹಾಗೂ ಭೀಕರ ಬರಗಾಲದ ಕುರಿತು ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಣ-ಆರೋಗ್ಯ ಕ್ಷೇತ್ರದಲ್ಲಿ ಅರಾಜಕತೆ: ರಾಜಕಾರಣಿಗಳೇ ಮುಂಚೂಣಿಯಲ್ಲಿದ್ದು ಸರ್ಕಾರಿ ಶಾಲೆ, ಕಾಲೇಜು ಮತ್ತು ಆಸ್ಪತ್ರೆಗಳನ್ನು ಮುಚ್ಚಿಸುತ್ತಿದ್ದಾರೆ. ಮಠ-ಮಾನ್ಯಗಳು ನಿರ್ಮಿಸಿರುವ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಬಡವರಿಗೆ ಉಚಿತ ಸೀಟುಗಳು ಸಿಗುತ್ತಿಲ್ಲ. ನೀಟ್ ಅಕ್ರಮದ ವಿರುದ್ಧ ನಡೆದ ಮಾದರಿಯಲ್ಲೇ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ದೊಡ್ಡ ಮಟ್ಟದ ಸಂಘಟನಾತ್ಮಕ ಚಳವಳಿ ನಡೆಯಬೇಕಿದೆ ಎಂದು ಕರೆ ನೀಡಿದರು.


ಕೆಪಿಎಸ್‍ಸಿಯಲ್ಲಿ ವ್ಯಾಪಕ ಭ್ರಷ್ಟಾಚಾರ: ತಹಸೀಲ್ದಾರ್ ಹಾಗೂ ಅಸಿಸ್ಟೆಂಟ್ ಕಮಿಷನರ್ ನಂತಹ ಉನ್ನತ ಹುದ್ದೆಗಳನ್ನು ಸೃಷ್ಟಿಸುವ ಕೆಪಿಎಸ್‍ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಜಾತಿ ಆಧಾರಿತ ನೇಮಕಾತಿ ಪದ್ಧತಿಗೆ ತಕ್ಷಣ ತಿಲಾಂಜಲಿ ನೀಡಬೇಕು ಎಂದು ಆಗ್ರಹಿಸಿದರು.


ರಾಜ್ಯವನ್ನು ಬರಪೀಡಿತ ಎಂದು ಘೋಷಿಸಿ: ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಜನ ಸಾಮಾನ್ಯರು ಹಾಗೂ ರೈತರು ಕಂಗಾಲಾಗಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಾಯಕರು ದೆಹಲಿ ಮಟ್ಟದಲ್ಲಿ ರಾಜಕೀಯ ಮಾಡುವುದರಲ್ಲೇ ನಿರತರಾಗಿದ್ದಾರೆ. ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ಸಭೆಗಳು ನಡೆಯುತ್ತಿಲ್ಲ. ತಕ್ಷಣವೇ ರಾಜ್ಯವನ್ನು ಬರಪೀಡಿತ ಎಂದು ಘೋಷಿಸಿ ಪರಿಹಾರ ಕಾರ್ಯ ಆರಂಭಿಸಬೇಕು ಎಂದರು.


ಬ್ಲ್ಯಾಕ್‍ಮೇಲ್ ತಂತ್ರ: ಸಿಎಂ ಸಿದ್ದರಾಮಯ್ಯ ಅವರನ್ನು ಭ್ರಷ್ಟಾಚಾರದ ನಾಯಕ ಎಂದು ಕಿಡಿ ಕಾರಿದ ವಿಶ್ವನಾಥ್, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವ ಸಿದ್ದರಾಮಯ್ಯನವರ ಹೇಳಿಕೆ ಕೇವಲ ಬ್ಲಾಕ್ ಮೇಲ್ ತಂತ್ರವಾಗಿದೆ. ಭವಿಷ್ಯದ ದೃಷ್ಟಿ ಇಟ್ಟುಕೊಂಡು ನಾನು ಚುನಾವಣೆಗೆ ನಿಲ್ಲಲ್ಲ ಎಂದು ಹೇಳುತ್ತಿದ್ದಾರೆ.
ನಾನು ಚುನಾವಣೆಗೆ ನಿಲ್ಲಲ್ಲ ಎಂದರೆ ಕುರುಬರು ಯಾರು ಓಟ್ ಹಾಕಲ್ಲ ಎಂಬ ರೀತಿಯಲ್ಲಿ ಬಿಂಬಿಸಲು ಹೊರಟಿದ್ದಾರೆ. ಈಗಾಗಲೆ ಕುರುಬರು ಸತ್ತು ಹೋಗಿದ್ದಾರೆ. ಸಿದ್ಧರಾಮಯ್ಯನಿಗಾಗಿ ತನು ಮನ ಅರ್ಪಿಸಿದ ಕುರುಬರಿಗೆ ಏನೂ ಸಿಗಲಿಲ್ಲ, ಈಗಾಗಲೆ 1.20 ಕೋಟಿ ಕುರುಬರಿದ್ದಾರೆ. 10 ಲಕ್ಷ ಅಲೆಮಾರಿ ಕುರುಬರಿದ್ದಾರೆ. ಯಾರಿಗೂ ಏನು ಮಾಡಲಿಲ್ಲ ಎಂದು ಹರಿಹಾಯ್ದರು.


ಇದೇ ವೇಳೆ, ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸುವುದು ಬೇಡ ಎಂದು ಅಭಿಪ್ರಾಯಪಟ್ಟರು.
ನಾನು ಇನ್ಮುಂದೆ ಚುನಾವಣಾ ರಾಜಕೀಯದಿಂದ ದೂರ ಉಳಿಯಲಿದ್ದು, ಸಾರ್ವಜನಿಕ ಜೀವನದಲ್ಲಿ ಜನಪರ ಹೋರಾಟಗಾರನಾಗಿ ಮುಂದುವರಿಯುತ್ತೇನೆ. ಯಾವುದೇ ಚುನಾವಣೆಗಳಲ್ಲಿ ನಿಲ್ಲುವುದಿಲ್ಲ ಎಂದು ಎಚ್.ವಿಶ್ವನಾಥ್ ತಿಳಿಸಿದರು.