
ಪುತ್ತೂರು; ಜಿಲ್ಲೆಯ ೫೦ ಸಾವಿರ ಕುಟುಂಬಗಳಿಗೆ ನಿವೇಶನ ನೀಡುವಂತೆ ರಾಜ್ಯ ಸರ್ಕಾರ ಗುರಿ ನೀಡಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ೭ ಸಾವಿರ ಕುಟುಂಬಗಳಿಗೆ ಡೀಸಿ ಮನ್ನಾ ಜಾಗವನ್ನು ವಿತರಣೆ ಮಾಡಲಾಗಿದೆ. ೨೨೨೮ ಕುಟುಂಬಗಳು ಕೃಷಿನಿವೇಶನಕ್ಕಾಗಿ ಬೇಡಿಕೆ ಸಲ್ಲಿಸಿವೆ. ಈ ಕುಟುಂಬಗಳಿಗೆ ಕೃಷಿ ಚಟುವಟಿಕೆಗಳಿಗಾಗಿ ತಲಾ ೧ ಎಕರೆ ಭೂಮಿಯನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಮನೆ ನಿವೇಶನಗಳಿಗೆ ಈಗಾಗಲೇ ಜಮೀನು ಮಂಜೂರು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ತಿಳಿಸಿದರು.
ಅವರು ಶುಕ್ರವಾರ ಪುತ್ತೂರು ತಾಪಂ ಸಭಾಂಗಣದಲ್ಲಿ ಕಡಬ ಮತ್ತು ಪುತ್ತೂರು ತಾಲೂಕಗಳ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಡೀಸಿ ಮನ್ನಾ ಜಾಗವನ್ನು ದಲಿತ ಸಮುದಾಯಗಳಿಗೆ ಶೀಘ್ರವಾಗಿ ಹಂಚಿಕೆ ಮಾಡುವಂತೆ ದಲಿತ ಮುಖಂಡ ರಾಜುಹೊಸ್ಮಠ ಪ್ರಸ್ತಾಪಿಸಿದ ಹಿನ್ನಲೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಈ ಮಾಹಿತಿ ನೀಡಿದರು.
ಅವಿಭಜಿತ ಪುತ್ತೂರು ತಾಲೂಕಿನಲ್ಲಿ ೨೫ ಸಾವಿರ ಆದಿದ್ರಾವಿಡ ಸಮುದಾಯದ ಕುಟುಂಬಗಳು ಇದ್ದು, ಅವರಿಗೆ ಒಳಮೀಸಲಾತಿ ಆಧರಿಸಿ ಎಬಿಸಿ ಎಂಬ ವರ್ಗೀಕರಣ ಮಾಡಲಾಗಿದೆ. ಇದರಲ್ಲಿ ನಿಷೇಧಿತ ಪದ ಉಲ್ಲೇಖಿಸಲ್ಪಟ್ಟಿದೆ. ಅಲ್ಲದೆ ಮೀಸಲಾತಿ ವರ್ಗೀಕರಣಕ್ಕೆ ಅಫಿದಾವಿತ್ ಕೇಳಲಾಗುತ್ತಿದೆ. ಈ ಅಫಿದಾವಿತ್ ಗಾಗಿ ಸುಮಾರು ೩೦೦ ಹಣ ವೆಚ್ಚ ಮಾಡಬೇಕಾಗುತ್ತದೆ. ಕುಟುಂಬಗಳು ವಾರಗಟ್ಟಲೆ ಅಲೆದಾಡಬೇಕಾಗುತ್ತದೆ. ಹಿಂದೆ ಸರಳೀಕರಣವಿತ್ತು. ಹಾಗಾಗಿ ಈ ಅಫಿದಾವಿತ್ ನೀಡುವುದನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದ ದಲಿತ ಮುಖಂಡ ವಾಮನ ಮತ್ತು ರಾಮ ಮೇನಾಲ ಅವರು ಆದಿದ್ರಾವಿಡ ಎಂಬ ಜಾತಿಯೇ ಇಲ್ಲ ಎಂದು ಆಯೋಗದ ಅಧ್ಯಕ್ಷ ನಾಗಭೂಷಣ್ ದಾಸ್ ನೀಡಿರುವ ಹೇಳಿಕೆಯನ್ನು ಖಂಡಿಸಿದರು.
ಕಡಬದ ಪಾಲ್ಸ್ ಒಂದರಲ್ಲಿ ಸ್ನಾನ ಮಾಡಲು ಹೋಗಿದ್ದ ಕೊರಗ ಸಮುದಾಯದ ವಿದ್ಯಾರ್ಥಿ ದಲಿತ ಸಮುದಾಯದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ದೂರು ಕೊಟ್ಟರೂ ಯಾರನ್ನು ಬಂಧಿಸಲಾಗಿಲ್ಲ. ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ ಎಂದು ವಸಂತ ಕುಬ್ಲಾಜೆ ಮತ್ತು ಶಶಿಧರ್ ಬೊಟ್ಟಡ್ಕ ಅವರು ಆರೋಪಿಸಿದರು. ಈ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದರು. ಈ ಪ್ರತಿಕ್ರಯಿಸಿದ ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ ಅವರು ಹಲ್ಲೆಗೊಳಗಾದ ಕುಟುಂಬಸ್ಥರು ನೀಡಿದ ಹೇಳಿಕೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಜಿಲ್ಲಾಧಿಕಾರಿ ಮಾತನಾಡಿ, ಅಟ್ರಾಸಿಟಿ ಕೇಸು ವಿಚಾರದಲ್ಲಿ ೭ ವರ್ಷದ ಒಳಗಿನ ಶಿಕ್ಷೆಯಾಗುವ ಪ್ರಕರಣ ದಾಖಲಾದಲ್ಲಿ ತಕ್ಷಣ ಬಂಧನ ಮಾಡುವ ಹಾಗಿಲ್ಲ. ಅದಕ್ಕಿಂತ ಮೇಲ್ಪಟ್ಟು ಶಿಕ್ಷೆಯಾಗುವ ಪ್ರಕರಣ ದಾಖಲಾದರೆ ಮಾತ್ರ ಬಂಧನದ ಅವಕಾಶ ಇದೆ. ಈ ಘಟನೆಯನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಲಾಗುವುದು ಎಂದರು.
ಕಟ್ಟಡ ಕಾರ್ಮಿಕರಿಗೆ ಪ್ರತೀ ವರ್ಷ ಮಳೆಗಾಲದ ಸಂದರ್ಭದ ೪ ತಿಂಗಳು ಯಾವುದೇ ಕೆಲಸ ಸಿಗುವುದಿಲ್ಲ. ಈ ಹಿನ್ನಲೆಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕನಿಷ್ಟ ೧೦ ಸಾವಿರ ಸಹಾಯಧನ ನೀಡಿದರೆ ಅವರ ಜೀವನಮಟ್ಟ ಸುಧಾರಣೆಗೆ ಅನುಕೂಲವಾಗಲಿದೆ ಎಂದು ದಲಿತ ಮುಖಂಡ ಗಣೇಶ್ ಕಾರೆಕ್ಕಾಡು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಅವರು ಮಳೆಗಾಲದಲ್ಲಿ ಕೆಲಸ ಇಲ್ಲ ಎಂದು ಸಂಬಳ ನೀಡುವ ಹಾಗಿಲ್ಲ. ಆದರೆ ನಿರುದ್ಯೋಗ ವೇತನ ಒದಗಿಸುವ ಕುರಿತು ಕಾರ್ಮಿಕ ಇಲಾಖೆ ಜತೆಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ರಕ್ತಪತ್ರ ಚಳುವಳಿ
ದರ್ಬೆ ವೃತ್ತಕ್ಕೆ ಅಂಬೇಡ್ಕರ್ ವೃತ್ತ ಎಂದು ಹೆಸರಿಡುವಂತೆ ೨೦೧೭ರಿಂದ ಪುತ್ತೂರು ನಗರಸಭೆಗೆ ವಿವಿಧ ದಲಿತ ಸಂಘಟನೆಗಳು ಮನವಿ ಸಲ್ಲಿಸುತ್ತಿವೆ. ಆದರೆ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಅಂಬೇಡ್ಕರ್ ವಿರೋಧಿ ಧೋರಣೆ ತಾಳುತ್ತಿವೆ. ಇದರೊಂದಿಗೆ ಅಧಿಕಾರಿ ವರ್ಗವೂ ಶಾಮೀಲಾಗಿದ್ದಾರೆ. ಕೆಲವರು ನ್ಯಾಯಾಲಯದ ಮೆಟ್ಟಲು ಏರಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನಾವು ಈ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ. ಅಂಬೇಡ್ಕರ್ ವೃತ್ತ ನಿರ್ಮಾಣಕ್ಕಾಗಿ ರಕ್ತಪತ್ರ ಚಳುವಳಿ ನಡೆಸುತ್ತೇವೆ ಎಂದು ದಲಿತ ಮುಖಂಡ ಸೇಸಪ್ಪ ನೆಕ್ಕಿಲು ಎಚ್ಚರಿಸಿದರು. ಈ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಅವರು ಆಕ್ಷೇಪಣೆ ಇದ್ದರೆ ಇರಲಿ. ಸರ್ಕಾರಕ್ಕೆ ತಕ್ಷಣ ಪ್ರಸ್ತಾವನೆ ಕಳಿಸಿ ಎಂದರು.
ವೇದಿಕೆಯಲ್ಲಿ ಎಡಿಷನಲ್ ಎಸ್ಪಿ ಅನಿಲ್ ಕುಮಾರ್ ಬೂಮಾರೆಡ್ಡಿ, ಪುತ್ತೂರು ಡಿವೈಎಸ್ಪಿ ಪ್ರಮೋದ್ ಕುಮಾರ್, ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ, ಪುತ್ತೂರು ತಹಶೀಲ್ದಾರ್, ಕಡಬ ತಹಶೀಲ್ದಾರ್ ಗಣೇಶ್ ಸವಣೂರ ಉಪಸ್ಥಿತರಿದ್ದರು. ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿ ವಂದಿಸಿದರು.


































